ಧಾರ್ಮಿಕ ಚಿತ್ರಗಳನ್ನು ನಿರ್ಮಿಸುವುದು ಸುಲಭದ ಕೆಲಸವಲ್ಲ. ದೊಡ್ಡ ಬಜೆಟ್ಟಿನಲ್ಲಿಯೇ ಇದನ್ನು ಮಾಡಬೇಕು. ಕೈಕೊಟ್ಟರೆ ಗೋವಿಂದ. ಪ್ರಪಾತದಲ್ಲಿ ಮೂಳೆಯೂ ಸಿಗುವುದಿಲ್ಲ. ಆದರೆ ನಮ್ಮ ಜನಪ್ರಿಯ ನಿರ್ಮಾಪಕ ಪಟ್ಟಾಭಿರಾಮ್ 'ಗಂಡುಗಲಿ ಕುಮಾರರಾಮ' ಚಿತ್ರ ತೋಪೆದ್ದ ನಂತರವೂ ಪ್ರಪಾತದಿಂದ ಮೇಲೆದ್ದು ಬಂದು ಮತ್ತೊಂದು ಸಾಹಸ ಮಾಡುತ್ತಿದ್ದಾರೆ.
ಪೌರಾಣಿಕ ಚಿತ್ರಕ್ಕೆ ಹೇಳಿ ಮಾಡಿಸಿದಂತಿದ್ದ ವರನಟ ಡಾ. ರಾಜಕುಮಾರ್ ಅವರ ಹಿರಿಯ ಪುತ್ರ ಹಾಗೂ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಥವಾ ಶಿವಣ್ಣನನ್ನು ಹಾಕಿಕೊಂಡು ಕುಮಾರರಾಮನನ್ನು ಮಾಡಿದ್ದರು. ಬಹುಕೋಟಿ ವೆಚ್ಚದ ಚಿತ್ರ ನಾಲ್ಕು ದಿನವೂ ಜನರನ್ನು ರಂಜಿಸಲಿಲ್ಲ. ಹೀಗಿರುವಾಗ ಈಗ ಹಳೆ ಸೋಲಿನ ನೋವಿನಿಂದ ಆಚೆ ಬಂದಿರುವ ಪಟ್ಟಾಭಿರಾಮ್ ಮತ್ತೊಂದು ಪೌರಾಣಿಕ ಕಥೆ ಹಿಡಿದು ಓಡಾಡುತ್ತಿದ್ದಾರೆ.
ಆದರೆ ಈ ಬಾರಿ ಅವರು ಚಿತ್ರ ನಿರ್ಮಿಸುವ ಸಾಹಸಕ್ಕೆ ಕೈಹಾಕಿಲ್ಲ. ಧಾರವಾಹಿಗೆ ತೃಪ್ತಿ ಪಟ್ಟುಕೊಳ್ಳಲಿದ್ದಾರಂತೆ. ಧಾರವಾಹಿ ಹೆಸರು 'ಗುರು ರಾಘವೇಂದ್ರ ವೈಭವ'. ಕುಮಾರರಾಮ ಕೈಬಿಟ್ಟ ನಂತರ ರಾಯರಾದರೂ ಕೈ ಹಿಡಿಯುತ್ತಾರಾ... ಅಂತವರು ಸತ್ವ ಪರೀಕ್ಷೆಗೆ ಮುಂದಾಗಿದ್ದಾರೆ.
ಧಾರಾವಾಹಿ ಜುಲೈ 21ರಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದ ರಾತ್ರಿ 10ಕ್ಕೆ ಇದು ಬರಲಿದೆ. ಈ ಮೂಲಕ ಪಟ್ಟಭಿರಾಮ್ ಇನ್ನೊಂದು ಸಾಧನೆಗೆ ಭಾಜನರಾಗಿದ್ದಾರೆ. ಧಾರವಾಹಿಯ ಒಂದಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಬ.ಲ. ಸುರೇಶ್ ಕಥೆ, ಚಿತ್ರಕಥೆಯ ಜತೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.