ಪ್ರೇಮಚಂದ್ರಮ ವಿವಾದ: ತಪ್ಪು ನಿರ್ದೇಶಕರದ್ದೋ, ಪ್ರೇಮ್‌ದೋ..?
MOKSHA
ನಿರ್ದೇಶಕ ಸಾಹುರಾಜ್ ಶಿಂಧೆ ಮೇಲೆ ಹಲವರು ಗೂಬೆ ಕೂರಿಸುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇವರ ಹೊಸ ಚಿತ್ರ ಪ್ರೇಮ ಚಂದ್ರಮ. ಇವರ ಹಾಗೂ ನಟ ಪ್ರೇಮ್ ಅವರ ನಡುವಿನ ಕೋಳಿ ಜಗಳದಿಂದಾಗಿ ಮುಹೂರ್ತಕ್ಕೂ ಮೊದಲೇ ಸುದ್ದಿಯಾದ ಚಿತ್ರವಿದು.
ಹೌದು. ಚಿತ್ರ ಆರಂಭಕ್ಕೆ ಮುನ್ನವೇ ನಾಯಕ ಪ್ರೇಮ್ ಹಾಗೂ ನಾಯಕಿ ನಿಖಿತಾ ಬಿಟ್ಟು ಹೋಗಿದ್ದಾರೆ. ನಿಖಿತಾ ಬಿಟ್ಟಿದ್ದು, ದರ್ಶನ್ ಅವರ ಪ್ರಿನ್ಸ್ ಚಿತ್ರಕ್ಕಾಗಿ ಎಂಬ ಮಾತು ಇದ್ದದ್ದೇ ಬಿಡಿ. ಅದೆಲ್ಲಾ ಹಾಗಿರಲಿ. ಆದರೆ ಪ್ರೇಮ್, ಚಿತ್ರದ ಆಮಂತ್ರಣ ಪತ್ರಿಕೆ ತಾನು ಮಾಡಿದ ಡಿಸೈನನ್ನು ಬದಲಾಯಿಸಿದ್ದಾರೆ ಎಂಬ ಕಾರಣದಿಂದ ಬಿಟ್ಟು ಹೋಗಿದ್ದಾರೆ ಅನ್ನುವುದು ಹಳೆ ಸುದ್ದಿ.
ಆದರೆ ಗಾಂಧಿನಗರ ಈ ರೀತಿಯ ಮಾತು ಆಡುತ್ತಿಲ್ಲ. ಇನ್ವಿಟೇಶನ್ ಕೈಲಿ ಹಿಡಿದುಕೊಂಡಿರುವ ಕೆಲ ಸಿನಿ ರಸಿಕರು ಶಿಂಧೆ ಸಾಹೇಬ್ರದ್ದೂ ಒಂದಿಷ್ಟು ಯಡವಟ್ಟಿದೆ ಎನ್ನುತ್ತಿದ್ದಾರೆ.
ಏಕೆಂದರೆ ಚಿತ್ರದ ಮುಹೂರ್ತದ ಆಮಂತ್ರಣ ಪತ್ರದಲ್ಲಿ ನಾಯಕನ ಹೆಸರಿರಲಿಲ್ಲವಂತೆ. ಬದಲಾಗಿ ಸಹನಟನ ಪಾತ್ರ ಮಾಡುತ್ತಿರುವ ಕಿರಣ್ ಹೆಸರಿದೆಯಂತೆ. ಹಾಗೆ ಸುಮ್ಮನೆ ಚಿತ್ರದಲ್ಲಿ ಅಭಿನಯಿಸಿದ್ದ ಕಿರಣ್ ಅವರ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಹೆಸರು ಹಾಕಲಾಗಿದೆ ಎಂದು ಗಾಂಧಿನಗರದ ಗಲ್ಲಿಗಳಲ್ಲಿ ಜನ ಮಾತಾಡಿಕೊಳ್ಳುತ್ತಿದ್ದಾರೆ.
ಇದೇ ಪ್ರೇಮ್ ಜಾಗದಲ್ಲಿ, ಪುನೀತ್, ದರ್ಶನ್, ಅಥವಾ ಗಣೇಶ್ ಇದ್ದಿದ್ದರೆ ನಿರ್ದೇಶಕರು ಹೀಗೆ ಆಡುತ್ತಿದ್ದರಾ ಅಂತ ಗಾಂಧಿನಗರದ ಮಂದಿ ಕೇಳುತ್ತಿದ್ದಾರೆ. ಇದಕ್ಕೆಲ್ಲಾ ಶಿಂಧೆ ಸಾಹೇಬ್ರೇ ಉತ್ತರಿಸಬೇಕು. ಒಟ್ಟಾರೆ ಪ್ರೇಮ್ ಬಿಟ್ಟು ಹೋದ ಜಾಗಕ್ಕಂತೂ ರಘು ಮುಖರ್ಜಿ ಬಂದಾಗಿದೆ. ನಿಖಿತಾ ಜಾಗವನ್ನು ರೇಖಾ ಅಲಂಕರಿಸಿದ್ದಾರೆ. ಆದರೆ, ಪಾಪ ಸೋತು ಸುಣ್ಣವಾಗಿ ಮನೆಯಲ್ಲಿ ಕೂತಿರುವ ನಮ್ಮ ಪ್ರೇಮ್‌ಗೆ ಮಾತ್ರ ಈ ಗತಿ ಬರಬಾರದಿತ್ತು ಅನ್ನುತ್ತಾರೆ ಅವರ ಹಿತೈಷಿಗಳು.