ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿತ್ರ ಬಿಡುಗಡೆಯಾಗದಿದ್ದರೂ ನಾಯಕಿಯಾದ ದಿವ್ಯಶ್ರೀ (Divyashri | Saacha | Aa | Vichithra Premi)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಚಿತ್ರವೇ ಬಿಡುಗಡೆಯಾಗದೇ ನಾಯಕಿ ಎನಿಸಿಕೊಂಡ ಅನೇಕ ನಟಿಮಣಿಯರು ಕನ್ನಡದಲ್ಲಿ ಇದ್ದಾರೆ. ಅವರೆಲ್ಲಾ ಚಿತ್ರವೊಂದು ಅಥವಾ ಹಲವುಗಳಲ್ಲಿ ನಾಯಕಿಯರೇ ಆದರೂ, ದುರಾದೃಷ್ಟವೆಂದರೆ ಚಿತ್ರ ಬಿಡುಗಡೆ ಅಗಿರುವುದಿಲ್ಲ. ಇಂಥವರ ಪಟ್ಟಿಗೆ ಹೊಸ ಸೇರ್ಪಡೆ ದಿವ್ಯಶ್ರೀ.

ಇವರ ಕೆಲವು ಚಿತ್ರಗಳು ಇನ್ನೇನು ಬಿಡುಗಡೆ ಅಗಬೇಕಿದೆ. 'ವಿಚಿತ್ರ ಪ್ರೇಮಿ' ಎನ್ನುವ ಹೆಸರಿನ ಚಿತ್ರವೊಂದು ಸದ್ಯವೇ ಬಿಡುಗಡೆ ಆಗಲಿದೆಯಂತೆ. ಇದಕ್ಕೂ ಮೊದಲು ಇವರು ಸಾಚ, ಅ, ಹೈಸ್ಕೂಲು ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದಾರೆ. ಅವ್ಯಾವುವೂ ಕೂಡಾ ಈವರೆಗೆ ಬಿಡುಗಡೆಯಾಗಿಲ್ಲ. ವಿಚಿತ್ರ ಪ್ರೇಮಿಯಾದರೂ ಕೊನೆಗೂ ಬಿಡುಗಡೆ ಕಂಡರೆ, ಅದು ಇವರ ಬಿಡುಗಡೆ ಭಾಗ್ಯ ಕಂಡ ಮೊದಲ ಚಿತ್ರವಾಗಲಿದೆ. ಉಳಿದವು ಆಗುತ್ತವೆಯೋ ಇಲ್ಲವೋ ದೇವರೇ ಬಲ್ಲ.

ಯಾಕಮ್ಮ ಹೀಗೆ ಮಾಡಿಕೊಂಡ್ರಿ ಅಂದ್ರೆ, ಕೈ ತಿರುಗಿಸುತ್ತಾ, 'ನಾನೇನ್ ಮಾಡ್ಲಿ? ನಂಗೆ ಯಾರೂ ಸರಿಯಾದ ದಾರಿ ತೋರಲಿಲ್ಲ. ಹಾಗಾಗಿ ಚಿತ್ರಗಳ ಆಯ್ಕೆ ಗೊತ್ತಾಗಲಿಲ್ಲ' ಅಂತಾರೆ.

ಅಂದಹಾಗೆ, ಇವರು ಇದುವರೆಗೂ ನಾಲ್ಕೈದು ಚಿತ್ರ ಮುಹೂರ್ತದಲ್ಲಿ ಪಾಲ್ಗೊಂಡದ್ದು ಬಿಟ್ಟರೆ ಬೇರೆ ಯಾವ ಸಾಧನೆಯನ್ನೂ ಮಾಡಿದಂತಿಲ್ಲ. ಆದರೆ ದಿವ್ಯಾ ಮಾತಿಗೆ ನಿಂತರೆ ಅಯ್ಯೋ... ನಾನು ಸಿನಿಮಾದಲ್ಲಿ ಒಂದಷ್ಟು ಸಾಧಿಸಬೇಕು ಎಂದು ಇಲ್ಲಿಗೆ ಬಂದೆ. ಆದರೆ, ನನಗೆ ಸರಿಯಾಗಿ ಮಾರ್ಗದರ್ಶನ ಮಾಡುವವರೇ ಇರಲಿಲ್ಲ. ಆನೇಕಲ್ ಬಾಲರಾಜ್ ಅವರು ನನ್ನನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದ್ದು. ಆದರೆ, ಅವರು ನಂತರದ ದಿನಗಳಲ್ಲಿ ಚಿತ್ರೋದ್ಯಮದಲ್ಲಿ ಹೇಗೆ ಮುಂದುವರಿಯಬೇಕು ಎಂದು ಹೇಳಿಕೊಡಲಿಲ್ಲ. ನನಗೆ ಗೊತ್ತಾಗಲಿಲ್ಲ. ನಮ್ಮ ಅಪ್ಪ ಅಮ್ಮನಿಗೆ ಆ ಬಗ್ಗೆ ಮಾಹಿತಿ ಇರಲಿಲ್ಲ. ಸಿಕ್ಕ ಸಿಕ್ಕ ಪಾತ್ರ, ಚಿತ್ರಗಳನ್ನು ಒಪ್ಪಿಕೊಂಡೆ. ಮುಹೂರ್ತವೇನೋ ಆಗುತ್ತಿತ್ತು. ಆದರೆ, ಒಂದೂ ಬಿಡುಗಡೆಯಾಗಲಿಲ್ಲ. 'ಅ' ಎಂಬ ಚಿತ್ರ ಬಿಡುಗಡೆಯಾಗಿತ್ತು ಎಂದಷ್ಟೇ ಗೊತ್ತು. ಯಾವ ಚಿತ್ರಮಂದಿರದಲ್ಲಿ? ಯಾವಾಗ? ಎಷ್ಟು ದಿನ ಓಡಿತು? ಯಾವ ವಿಷಯವೂ ಗೊತ್ತಿಲ್ಲ. ಆದರೆ, ಇನ್ನುಮುಂದೆ ಇಂಥ ತಪ್ಪು ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳುತ್ತಾರೆ.

ಪಾಪ ಮಾರ್ಗದರ್ಶಕರಿಗೆ ಕನ್ನಡ ಚಿತ್ರರಂಗದಲ್ಲಿ ಕೊರತೆಯೇನು ಇಲ್ಲ. ಇಷ್ಟು ದಿನ ಅವರಿಲ್ಲದೇ ಸಾಗಿದ ದಿವ್ಯಾ ಇಷ್ಟಾದರೂ ಉಳಿದಿದ್ದಾರೆ. ದಯವಿಟ್ಟು ಬಂದ ದಾರಿಗೆ ಸುಂಕವಿಲ್ಲ ಅಂತ ಹೊರಟು ಹೋಗುವುದು ಉತ್ತಮ. ಇಲ್ಲವಾದರೆ ಮಾರ್ಗದರ್ಶಕರು ಎಲ್ಲೆಲ್ಲಿಗೆ ಕರೆದೊಯ್ಯುತ್ತಾರೋ ಯಾರಿಗೆ ಗೊತ್ತು?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಿವ್ಯಶ್ರೀ, ಸಾಚ, ವಿಚಿತ್ರ ಪ್ರೇಮಿ,