ಸರ್ಕಸ್ ಚಿತ್ರದ ಛಾಯಾಗ್ರಾಹಕರಿಗೆ ಇನ್ನೂ ಸಂಭಾವನೆ ಸಿಕ್ಕಿಲ್ಲ!
MOKSHA
ಚಿತ್ರವೊಂದು ಸಿದ್ಧವಾಗಬೇಕಿದ್ದರೆ ಅದರಲ್ಲಿ ಎಲ್ಲರ ಪಾತ್ರ ಸಕ್ರಿಯವಾಗಿರಬೇಕು. ನಟ ಒಂದು ಕಡೆ, ನಿರ್ಮಾಪಕ ಮತ್ತೊಂದು ಕಡೆ, ನಿರ್ದೇಶಕ ಎಲ್ಲೋ ಇನ್ನೊಂದೆಡೆ, ಸಂಗೀತ ನಿರ್ದೇಶಕ, ಸಾಹಸ ನಿರ್ದೇಶಕ ಮಗದೊಂದು ಕಡೆ ಆದರೆ ಸಿದ್ಧವಾದ ಚಿತ್ರ ಬಿಡುಗಡೆ ಆದರೆ ಗೆಲ್ಲಲು ಸಾಧ್ಯವೇ?
ಇನ್ನು ಶ್ರಮಿಸಿದವರಿಗೆ ನಯಾ ಪೈಸೆ ಕೊಡದೇ ಇದ್ದರೆ ಶ್ರಮಿಕರು ಹಿಡಿ ಶಾಪ ಹಾಕದೇ ಹೋಗುತ್ತಾರಾ? ಖಂಡಿತಾ ಸಾಧ್ಯವಿಲ್ಲ. ಇದಕ್ಕೆ ನಮ್ಮ ದಯಾಳ್ ಪದ್ಮನಾಭನ್ ಸಾಕ್ಷಿ. ಯಾರು ಅಂತ ಕೇಳಿದ್ರಾ? ಅದೇ, ಸರ್ಕಸ್, ಶ್ರೀಹರಿಕಥೆ ಎಂಬ ಎರಡು ತೋಪು ಚಿತ್ರ ನೀಡಿದ ದಯಾಳ್. ಇವರು ತಮ್ಮ ಸರ್ಕಸ್ ಚಿತ್ರದಲ್ಲಿ ಕೆಲಸ ಮಾಡಿದ ತಂತ್ರಜ್ಞರಿಗೆ ಇನ್ನೂ ಸಂಭಾವನೆಯನ್ನೇ ನೀಡಿಲ್ವಂತೆ. ಹಾಗಂತ ಆ ಚಿತ್ರದ ಛಾಯಾಗ್ರಾಹಕರಾದ ಶೇಖರ್ ಚಂದ್ರ ಅಲವತ್ತುಕೊಂಡಿದ್ದಾರೆ.
ಅವರೇ ಹೇಳುವಂತೆ, 'ನಿಜ ಹೇಳುತ್ತೇನೆ. ಸರ್ಕಸ್ ಚಿತ್ರದ ಸಂಭಾವನೆ ಅಂತ ನಯಾ ಪೈಸೆ ಬಂದಿಲ್ಲ. ಗೆಳೆಯರೆಲ್ಲ ಸೇರಿ ಮಾಡುತ್ತಿದ್ದೇವೆ ಎಂದು ಕಡಿಮೆ ಸಂಭಾವನೆಗೆ ಒಪ್ಪಿಕೊಂಡು, ಸಿನಿಮಾ ಮುಗಿಸಿಕೊಟ್ಟೆ. ಆದರೆ, ಸಿನಿಮಾ ಮುಗಿದ ನಂತರ ಆ ಬಗ್ಗೆ ದಯಾಳ್ ಮಾತನಾಡಲೇ ಇಲ್ಲ. ಸಿನಿಮಾ ಸೋತಿದೆ ಎನ್ನುವುದು ಬೇರೆ ವಿಷಯ. ನಾವು ಕ್ಯಾಮೆರಾ ನಂಬಿ ಜೀವನ ಮಾಡುತ್ತಿರುವವವರು. ಅಕಸ್ಮಾತ್ ಸಿನಿಮಾ ಗೆದ್ದಿದ್ದರೆ ನಾನು ಖಂಡಿತ ಪಾಲು ಕೇಳುತ್ತಿರಲಿಲ್ಲ. ನಾನು ಕೇಳಿದ್ದು ನನ್ನ ಕೂಲಿ. ಸಿಕ್ಕಾಗಲೆಲ್ಲ ಈಗ ಆಗ ಎಂದು ಸತಾಯಿಸುತ್ತಿದ್ದರು. ಕೊನೆ ಕೊನೆಗೆ ನನಗೇ ಬೇಸರವಾಗಿ, ಕೇಳುವುದನ್ನೇ ಬಿಟ್ಟು ಬಿಟ್ಟೆ' ಎನ್ನುತ್ತಾರೆ.
ಇಷ್ಟಾದರೂ ಮಾತು ಮುಂದುವರಿಸಿ, 'ಇಂದು ನಾನು ಎಲ್ಲೇ ಇದ್ದರೂ ಚೆನ್ನಾಗಿದ್ದೇನೆ. ನಮ್ಮ ಕಷ್ಟ ನಮಗಿರಲಿ. ಅವರು ಚೆನ್ನಾಗಿರಲಿ' ಎಂದು ಹೇಳುತ್ತಾರೆ. ದಯಾಳ್ ಕೈ ಸಿಕ್ಕು ಸೋತ ಇಬ್ಬರು ನಿರ್ಮಾಪಕರು ಕೂಡಾ ಮೇಲೇಳದಂತೆ ಮಕಾಡೆ ಮಲಗಿ ಬಿಟ್ಟಿದ್ದಾರೆ ಎಂಬುದೂ ಕೂಡಾ ಮತ್ತೊಂದು ಸುದ್ದಿ.