ಕಳೆದ ವರ್ಷ ಅಕ್ಕ ಸಮ್ಮೇಳನಕ್ಕೆ ಚಿತ್ರರಂಗದ ದಂಡೇ ಹೋಗಿದ್ದು ಎಲ್ಲರಿಗೂ ಗೊತ್ತು. ರಾಜಕಾರಣಿಗಳು ಈ ಮಾದರಿಯ ಸಮಾರಂಭಕ್ಕೆ ಹೋಗುವುದು ಸಾಮಾನ್ಯ. ಚಿತ್ರನಟರೂ ಕೂಡಾ ಸಾಗುವುದು ಇತ್ತೀಚೆಗೆ ಬೆಳೇದುಬಂದ ಹೊಸ ಸಂಪ್ರದಾಯ. ಅದೇನೇ ಇರಲಿ. ಮುಂದಿನ ತಿಂಗಳು ಅಮೆರಿಕದ ನಾವಿಕ ಸಂಸ್ಥೆ ಮೂರು ದಿನದ ಕನ್ನಡ ಸಮ್ಮೇಳನ ಹಮ್ಮಿಕೊಂಡಿದೆ. ಭಾರತದಿಂದ ಸಾಕಷ್ಟು ಜನ ಇದಕ್ಕೆ ತೆರಳುತ್ತಿದ್ದಾರೆ. ರಾಜಕಾರಣಿಗಳು, ಸಾರ್ವಜನಿಕರು, ಉದ್ಯಮಿಗಳು, ಪತ್ರಕರ್ತರು, ಚಿತ್ರರಂಗದ ಕಲಿಗಳು ಇತ್ಯಾದಿ.
ಎಣಿಕೆಯಂತೆ ಎಲ್ಲವೂ ಆಗಿದ್ದರೆ ಮುಂದಿನ ತಿಂಗಳು ಸಮ್ಮೇಳನದ ಹೆಸರಿನಲ್ಲಿ ಸರಕಾರಿ ವೆಚ್ಚದಲ್ಲಿ ನಟ ಗಣೇಶ್ ತೆರಳಬೇಕಿತ್ತು. ಕನ್ನಡದ ಪ್ರತಿನಿಧಿ ಎಂಬ ಗುರುತಿನ ಮೇಲೆ ಅವರು ತೆರಳಬೇಕಿತ್ತು. ಆದರೆ ಅಂದುಕೊಂಡ ಹಾಗೆ ಎಲ್ಲವೂ ಹೇಗೆ ಆದೀತು ಹೇಳಿ. ಹಾಗಾಗಿ ಗಣೇಶ್ ನಾವಿಕದ ವಿಮಾನ ಹತ್ತುತ್ತಿಲ್ಲ. ಕಾರಣ ಚಿತ್ರರಂಗದಲ್ಲಿ ಭಾರೀ ಬ್ಯುಸಿ ಅಂತೆ!
ವಿಚಿತ್ರವೆಂದರೆ ಗಣೇಶ್ ಏನೋ, ನಾನು ಭಾರೀ ಬ್ಯುಸಿ ಎನ್ನಬಹುದು. ಆದರೆ ಇದರ ಹಿಂದೆ ಬೇರೆಯೇ ಕಥೆಗಳು ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ, ಸಮ್ಮೇಳನದಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿ ಕರ್ನಾಟಕ ಸರಕಾರ ನಟ ಗಣೇಶ್ ಅವರನ್ನು ಆಯ್ಕೆ ಮಾಡಿತ್ತು. ಆದರೆ, ಗಣೇಶ್ ತಮ್ಮ ಫ್ಯಾಮಿಲಿಗೆ ಅರ್ಥಾತ್ ತನಗೆ ಮಗುವಿಗೆ ಹಾಗೂ ಹೆಂಡತಿ ಶಿಲ್ಪಾಗೆ ಸೇರಿ ಎಕ್ಸಿಕ್ಯೂಟಿವ್ ದರ್ಜೆಯ ವಿಮಾನ ಟಿಕೆಟ್ ಬುಕ್ ಮಾಡಿದರೆ ಮಾತ್ರ ತೆರಳುತ್ತೇನೆ ಎಂದು ಹೋಗುತ್ತೇನೆ ಅಂದರಂತೆ. ಆದರೆ ಸರ್ಕಾರ ನಟರೆಲ್ಲರಿಗೂ ಎಕಾನಮಿ ದರ್ಜೆಯಲ್ಲಿ ಟಿಕೆಟ್ ಬುಕ್ ಮಾಡಿದೆ. ಗಣೇಶ್ ಬೇಡಿಕೆಗೆ ಸ್ಪಂದಿಸಿಲ್ಲ. ಅದಕ್ಕೇ ಸಿಟ್ಟು ಮಾಡಿಕೊಂಡು ಗಣೇಶ್ ಹೋಗಲ್ಲ ಅಂತಿದ್ದಾರೆ ಎನ್ನುತ್ತವೆ ಮೂಲಗಳು. ಅತ್ತ ಸರಕಾರ ಸುಮ್ಮನಾಗಿದೆ ಬಿಡಿ. ಬೆಂಕಿ ಇಲ್ಲದೇ ಹೊಗೆ ಆಡಲು ಸಾಧ್ಯವೇ ಹೇಳಿ?