ಡಯಾನಾ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಬೆಂಗಳೂರು ಸಮೀಪದ ನಂದಿ ಬೆಟ್ಟದಲ್ಲಿ ಇತ್ತೀಚೆಗೆ ಮೊದಲ ಹಂತದ ಕೊನೆಯ ಕ್ಷಣಗಳ ಚಿತ್ರೀಕರಣ ನಡೆದವು.
ಡಯಾನಾ ಹಾಗೂ ಅವಳ ಪ್ರೇಮಿಯ ನಡುವಿನ ಪ್ರೇಮ ದೃಶ್ಯಗಳು ಇಲ್ಲಿ ಶೂಟ್ ಆದವು. ನಿರ್ದೇಶಕ ಕವಿರಾಜೇಶ್ ಇಡೀ ತಂಡವನ್ನು ಅಚ್ಚುಕಟ್ಟಾಗಿ ನಿಯಂತ್ರಿಸುವ ಮೂಲಕ ಚಿತ್ರೀಕರಣ ಯಶಸ್ವಿಗೊಳಿಸಿದರು. ರಾಜರಾಜೇಶ್ವರಿನಗರದ ಕೈಪು ಹೌಸ್, ಮೈಸೂರು ರಸ್ತೆಯ ಹೈಟೆಕ್ ಆಸ್ಪತ್ರೆ ಸೇರಿದಂತೆ ನಗರದ ನಾನಾ ಭಾಗಗಳಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ನಡೆದಿದೆ. ಇದರಲ್ಲಿ ನಟ ದ್ರುವ, ನಟಿಯರಾದ ಸಂಗೀತಾ ಶೆಟ್ಟಿ, ಸನಾತನಿ, ಚಿತ್ರಾ ಶೆಣೈ, ಪ್ರಮಿಳಾ ಜೋಷಾಯ್ ಮುಂತಾದವರು ಪಾಲ್ಗೊಂಡಿದ್ದರು.
ಈ ತಿಂಗಳ 25ರಿಂದ ಹಾಡುಗಳ ಚಿತ್ರೀಕರಣ ನಡೆಯಲಿದೆ. ಎರಡು ಹಾಡುಗಳು ಕಲ್ಯಾಣನಗರಿಯಲ್ಲೇ ನಡೆಯಲಿವೆಯಂತೆ. ಕ್ರೀಡೆಗೆ ಸಂಬಂಧಿಸಿ ಸಿದ್ಧಪಡಿಸಿರುವ ಈ ಚಿತ್ರ ಒಲಂಪಿಕ್‌ನ ದೃಶ್ಯಾವಳಿಯನ್ನು ಒಳಗೊಳ್ಳಲಿದೆ. ನಿಜಕ್ಕೂ ಒಂದು ಸವಾಲನ್ನು ಹೊತ್ತಿರುವ ಕವಿರಾಜೇಶ್ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.