ನಿರ್ದೇಶಕ ಲೇಖನ್ ಕೈಗೀಗ ಉದಯವಾಣಿ ಸಿಕ್ಕಿದೆ. ಇದೇನು ಕರಾವಳಿಯ ಜನಪ್ರಿಯ ಪತ್ರಿಕೆ ಉದಯವಾಣಿಗೆ ಏನಾಯಿತು ಅಂತೆಲ್ಲಾ ಮಂಡೆ ಬಿಸಿ ಮಾಡಬೇಡಿ ಮಾರಾಯ್ರೆ. ವಿಷಯ ಪಕ್ಕಾ ಸಿಂಪಲ್.
ಚಿತ್ರ ವಿಚಿತ್ರ ಹೆಸರಿಟ್ಟು ಜನರನ್ನು ಆಕರ್ಷಿಸುವ ಟ್ರೆಂಡ್ ಸಿನಿಮಾ ವಲಯದಲ್ಲಿ ಇದ್ದೇ ಇದೆ. ಈಗ ಆ ಸರದಿ ನಿರ್ದೇಶಕ ಲೇಖನ್‌ರದ್ದು. ಅವರು ತಮ್ಮ ಮುಂದಿನ ಚಿತ್ರಕ್ಕೆ ಉದಯವಾಣಿ ಅಂತ ಹೆಸರಿಟ್ಟಿದ್ದಾರೆ. ಸಿಹಿಗಾಳಿ ನಂತರ ನಿರ್ದೇಶಕರು ಕೈಗೆತ್ತಿಕೊಂಡಿರುವ ಹೊಸ ಚಿತ್ರವಿದು. ಚಿತ್ರದ ಹೆಸರು ಪಕ್ಕಾದರೂ, ನಾಯಕ ನಾಯಕಿ, ಚಿತ್ರತಂಡ ರಚನೆ ಇನ್ನು ಪಕ್ಕಾ ಆಗಬೇಕಿದೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದು, ಚಿತ್ರದ ಚಿತ್ರೀಕರಣವೂ ಶೀಘ್ರವೇ ಆರಂಭವಾಗಲಿದ್ದು, ಸೆಪ್ಟೆಂಬರಿನಲ್ಲಿ ತೆರೆಗೆ ತರುವ ಯತ್ನ ಇವರದ್ದು.
ಅಂದಹಾಗೆ, ಇದೊಂದು ದೊಡ್ಡ ಬಜೆಟ್ ಚಿತ್ರವಂತೆ. ನಾಯಕರಾಗಿ ರವಿತೇಜ ಹಾಗೂ ನಾಯಕಿಯಾಗಿ ಜಂಭದ ಹುಡುಗಿ ಪ್ರಿಯಾ ಹಾಸನ್ ನಟಿಸಬಹುದು ಅನ್ನಲಾಗುತ್ತಿದೆ. ತೆಲುಗಿನ ರವಿತೇಜ ಕೊನೆಗೂ ಕನ್ನಡಕ್ಕೆ ಬಂದರು ಅಂತ ಖಂಡಿತಾ ಅಂದುಕೋಬೇಡಿ. ಇದು ಅಪ್ಪಟ ಕನ್ನಡ ಪ್ರತಿಭೆ ರವಿತೇಜ. ಅವರಿಗೂ ಇದು ಮೊದಲ ಚಿತ್ರ. ಚಿತ್ರ ಒಂದು ಹೊಸ ಪ್ರಯೋಗ ಅನ್ನುವ ಮಾತನ್ನು ನಿರ್ದೇಶಕರು ಆಡುತ್ತಿದ್ದಾರೆ. ಪ್ರಬಲ ತಾಂತ್ರಿಕ ವರ್ಗದ ಸಹಕಾರದೊಂದಿಗೆ ಅದ್ದೂರಿಯಾಗಿ ಚಿತ್ರ ಸಿದ್ಧಪಡಿಸುವ ಆಶಯ ಅವರದ್ದು.
ಚಿತ್ರಕ್ಕೆ ಅಭಿಮಾನ್ ರಾಯ್ ಅಥವಾ ವಿ. ರವಿಕೃಷ್ಣ ಸಂಗೀತ ನೀಡಬಹುದು. ಪ್ರಿಯಾ ಹಸನ್ಗೆ ಅತ್ಯಂತ ಸೂಟ್ ಆಗುವ ಪಾತ್ರ ಇದರಲ್ಲಿದೆಯಂತೆ. ಅಂದಹಾಗೆ ಪ್ರಿಯಾರ 'ಬಿಂದಾಸ್ ಹುಡುಗಿ' ಚಿತ್ರ ಸಂಪೂರ್ಣ ಸಿದ್ಧವಾಗಿದ್ದು, ಸದ್ಯವೇ ತೆರಗೆ ಬರುವ ಸೂಚನೆ ನೀಡಿದೆ. ಆಲ್ ದಿ ಬೆಸ್ಟ್ ಬಿಂದಾಸ್ ಹುಡುಗಿ.