ಪ್ರಜ್ವಲ್ ದೇವರಾಜ್ ಅದೃಷ್ಟ ತುಂಬಾ ಚೆನ್ನಾಗಿದೆ. ಮಾಡಿದ ಬಹುತೇಕ ಚಿತ್ರ ನೆಲಕಚ್ಚಿವೆ. ಆದರೂ ಹೊಸ ಚಿತ್ರಗಳು ಇವರನ್ನು ಹುಡುಕಿ ಬರುತ್ತಲೇ ಇವೆ. ಅದೃಷ್ಟ ಅಂದರೆ ಇದು.
ಒಂದೆಡೆ ತಂದೆ ದೇವರಾಜ್ ತಮ್ಮ ವಯಸ್ಸಿಗೆ ಮೀರಿ ಹೀರೋಗೆ ಸರಿಸಮನಾದ ಪಾತ್ರ ನಿರ್ವಹಿಸಿ ಗೆಲ್ಲುತ್ತಿದ್ದರೆ, ಎಲ್ಲವೂ ಇದ್ದೂ ಪ್ರಜ್ವಲ್ ಮಾತ್ರ ಪ್ರಜ್ವಲಿಸುತ್ತಿಲ್ಲ. ಆದರೆ ಇದೀಗ ಅವರ ಮಡಿಲಿಗೆ ಇನ್ನೊಂದು ಚಿತ್ರ ಬಿದ್ದಿದೆ. ಹೆಸರು 'ವಿಘ್ನೇಶ'.
ಎನ್. ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶ್ರೀನಿವಾಸರಾಜು ನಿರ್ದೇಶಿಸಲಿದ್ದಾರೆ. ಇವರು ಈ ಹಿಂದೆ ಪ್ರಜ್ವಲ್ ಅಭಿನಯದ 'ನನ್ನವನು' ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರದಲ್ಲಿ ಇಬ್ಬರು ನಾಯಕಿಯರು ಇದ್ದಾರಂತೆ. ಅವರು ಯಾರು ಎನ್ನುವುದು ಇನ್ನೂ ಸಸ್ಪೆನ್ಸ್ ಆಗಿ ಇರಿಸಲಾಗಿದೆ. ವಿಚಾರಿಸಿದರೆ ಹುಡುಕಾಟ ನಡೆದಿದೆ. ಕನ್ನಡದವರಿಗೆ ಮಾನ್ಯತೆ ನೀಡುತ್ತೇವೆ ಎಂಬ ಮಾತು ಸಂಬಂಧಿಸಿದವರಿಂದ ಕೇಳಿ ಬರುತ್ತಿದೆ.
ಇಬ್ಬರು ನಾಯಕಿಯರಿರುವ ಕಾರಣ ಒಟ್ಟಾರೆ ಮತ್ತೊಂದು ತ್ರಿಕೋನ ಪ್ರೇಮ ಕಥೆ ಕನ್ನಡದಲ್ಲಿ ಬರುತ್ತಿದೆ ಎಂದು ಹೇಳಲು ಅಡ್ಡಿ ಇಲ್ಲ. ಕೆ. ದತ್ತು ಛಾಯಾಗ್ರಹಣ, ಗುರುಕಿರಣ್ ಸಂಗೀತ ಹಾಗೂ ರವಿವರ್ಮ ಸಾಹಸ ಚಿತ್ರಕ್ಕೆ ಲಭಿಸಿದೆ. ಎಲ್ಲಾ ಸರಿಯಾಗಿ ನಡೆದರೆ ಆಗಸ್ಟಿನಲ್ಲಿ ಚಿತ್ರ ಸೆಟ್ಟೇರಲಿದೆ.