20 ವರ್ಷ ಹಿಂದೆ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಖುಷ್ಬೂ ಅಭಿನಯದ ಅಂಜದ ಗಂಡು ಚಿತ್ರ ಎಷ್ಟೊಂದು ದೊಡ್ಡ ಸುದ್ದಿ ಮಾಡಿತ್ತು ಎನ್ನುವುದು ಎಲ್ಲರಿಗೂ ಗೊತ್ತು. ಆ ಚಿತ್ರ ಇಂದು ಟಿವಿಯಲ್ಲಿ ಬರುತ್ತಿದ್ದರೆ, ಇಂದಿನ ಯುವ ಪೀಳಿಗೆಯೂ ಅಚ್ಚರಿಯಿಂದ ವೀಕ್ಷಿಸುತ್ತದೆ.
ಅಂದು ರೇಣುಕಾ ಶರ್ಮ ನಿರ್ದೇಶಿಸಿದ್ದ ಚಿತ್ರವನ್ನು ಬಿ.ಎನ್. ಗಂಗಾಧರ್ ನಿರ್ಮಿಸಿದ್ದರು. ಹಂಸಲೇಖ ಸಂಗೀತ ಅಂದು ಜನರನ್ನು ಹುಚ್ಚೆಬ್ಬಿಸಿತ್ತು. ಮುಂದಿನ ದಿನಗಳಲ್ಲಿ ರವಿಚಂದ್ರನ್ ಹಾಗೂ ಹಂಸಲೇಖ ಜೋಡಿಯ 25ಕ್ಕೂ ಹೆಚ್ಚು ಚಿತ್ರಗಳು ಸಾಲು ಸಾಲು ಯಶ ಕಂಡದ್ದು ಇತಿಹಾಸ. ಇದೀಗ ಆ ಎಲ್ಲಾ ದಾಖಲೆಗಳ ನಿರ್ಮಾಣ ಎಷ್ಟು ಸಾಧ್ಯವೋ ಗೊತ್ತಿಲ್ಲ. ಆದರೆ ಚಿತ್ರವನ್ನು ಮತ್ತೆ ಹಿರಿತೆರೆಗೆ ತರುವ ವಿನೂತನ ಯತ್ನಕ್ಕೆ ಚಾಲನೆ ಸಿಕ್ಕಿದೆ. ಚಿತ್ರ ಪ್ರೇಮಿಗಳ ಪಾಲಿಗೆ ಅಂಜದ ಗಂಡು ಮತ್ತೆ ಲಭಿಸಲಿದೆ.
ಹಳೆಯ ಜಾಡಿನಲ್ಲಿ ಹೊಸ ಚಿತ್ರ ನಿರ್ಮಿಸುವ ಸಂಪ್ರದಾಯಕ್ಕೆ ಕನ್ನಡ ಚಿತ್ರರಂಗ ತುಂಬಾ ಹಿಂದೆಯೇ ನಾಂದಿ ಹಾಡಿದೆ. ಇತ್ತೀಚೆಗೆ ಈ ಪ್ರಮಾಣ ಹೆಚ್ಚಾಗಿದ್ದು, ರಾಣಿ ಮಹಾರಾಣಿ, ಅಂತ ಚಿತ್ರಗಳು ಇದಕ್ಕೆ ಸಾಕ್ಷಿ. ಇದೀಗ ಅಂಜದ ಗಂಡು ತೆರೆಗೆ ಬರುವ ಯತ್ನ ಮಾಡುತ್ತಿದೆ. ಬಿ.ಎನ್. ಗಂಗಾಧರ್ ಸದ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾಗಿದ್ದು, ಮತ್ತೊಮ್ಮೆ ಅಂಜದಗಂಡು ಚಿತ್ರ ನಿರ್ಮಿಸುವ ಸಾಹಸಕ್ಕೆ ಇಳಿದಿದ್ದಾರೆ.
ಆಧುನಿಕ ಬದಲಾವಣೆಗೆ ತಕ್ಕಂತೆ ಚಿತ್ರದಲ್ಲಿ ಕೆಲ ಮಾರ್ಪಾಡು ಆಗಲಿದೆಯಂತೆ. ಉಳಿದಂತೆ ಚಿತ್ರದ ನಾಯಕ, ನಾಯಕಿ ಯಾರು, ಹಂಸಲೇಖರೇ ಸಂಗೀತ ರಚಿಸುತ್ತಾರಾ? ಎಂಬಿತ್ಯಾದಿ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಚಿತ್ರ ಬರುವುದಂತೂ ಶತಸಿದ್ಧ ಅಂದಿದ್ದಾರೆ ಗಂಗಾಧರ್. ಮತ್ತೊಮ್ಮೆ ಜನರಿಗೆ 'ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ...', 'ರಂಭಾ ಬೇಡ ಜಂಭ...' ಮತ್ತಿತರ ಹಾಡನ್ನು ಕೇಳುವ ಅವಕಾಶ ಸಿಗಲಿದೆ. ಚಿತ್ರ ಹೇಗಿರುತ್ತೋ ಏನೋ!?