ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ನಿತ್ಯ ಹತ್ತಾರು ಮಂದಿ ಹೊಸಬರು ಕಾಲಿರಿಸುತ್ತಾರೆ. ಆದರೆ ಅವಕಾಶ ಎಲ್ಲೂ ಸಿಗದಿದ್ದಾಗ, ತಾವೇ ಒಂದು ಚಿತ್ರ ಸಿದ್ಧಪಡಿಸುತ್ತಾರೆ. ಅದೇ ಮಾದರಿಯ ಚಿತ್ರ 'ಪ್ರೀತಿಯ ಲೋಕ'.
ಯುವಕರನ್ನು ಸೆಳೆಯಲು ಇನ್ನೊಂದು ಪ್ರೇಮಕಥೆ ಇಟ್ಟು ಚಿತ್ರ ಸಿದ್ಧಪಡಿಸಿದ್ದಾರೆ ಹೊಸನಿರ್ದೇಶಕ ನಂಜನ್ ಪ್ರಭು. ವಿನಯ್ ನಾಯಕ್ ನಟ ಹಾಗೂ ಎರಡೇ ಚಿತ್ರದಲ್ಲಿ ಅಭಿನಯಿಸಿರುವ ಅರ್ಚನಾ ನಾಯಕಿ. ಎಸ್. ಮಾಧವ ರೆಡ್ಡಿ ನಿರ್ಮಾಣದ ಈ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಅಲ್ಲಿಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಗಮಿಸಿದ್ದು ವಿಶೇಷವಾಗಿತ್ತು.
ನಿರ್ದೇಶಕರು ಸುಮಾರು ಎರಡು ವರ್ಷ ಕೂಡಿ ಕಳೆದು ಈ ಚಿತ್ರ ಸಿದ್ಧಪಡಿಸಿದ್ದಾರಂತೆ. ಚಿತ್ರದಲ್ಲಿ ಗ್ಲಾಮರ್ ಇಲ್ಲ, ಎಕ್ಸ್‌ಪೋಸ್ ಇಲ್ಲ. ಒಂದು ಉತ್ತಮ ಪಾತ್ರ ಪೋಷಣೆ ಇದೆ ಅನ್ನುವ ಕಾರಣಕ್ಕೆ ಚಿತ್ರ ಒಪ್ಪಿಕೊಂಡೆ. ನಿಜಕ್ಕೂ ಇದು ನನ್ನ ಜೀವನದಲ್ಲಿ ಒಂದು ಉತ್ತಮ ತಿರುವು ತಂದುಕೊಡಲಿದೆ ಎನ್ನುತ್ತಾರೆ ಚಿತ್ರದ ನಾಯಕಿ ಅರ್ಚನಾ.
ಪ್ರೀತಿಸುವ ಹುಡುಗರಿಗೆ ಪಾಲಕರೇ ವಿಲನ್ ಆಗುತ್ತಾರೆ. ಅತ್ಯಂತ ಪ್ರೀತಿಯಿಂದ ಮಕ್ಕಳನ್ನು ಸಲುಹುವ ಇವರು ಮಕ್ಕಳು ಪ್ರೀತಿಗೆ ಬಿದ್ದರೆ ಸಹಿಸುವುದಿಲ್ಲ. ವಿರೋಧಿಸುತ್ತಾರೆ. ತಪ್ಪಿಸಿ ಹಾಕಲು ಯತ್ನಿಸುತ್ತಾರೆ. ಚಿತ್ರದಲ್ಲಿಯೂ ಇದೇ ಕಥೆ ಮರಳಿದೆ. ಇಲ್ಲಿ ನಾಯಕಿಗೆ ತಾಯಿ ಇರುವುದಿಲ್ಲ. ತಂದೆಯ ಆಶ್ರಯದಲ್ಲಿ ಬೆಳೆಯುತ್ತಾಳೆ. ಪ್ರೀತಿಗೆ ಬೀಳುತ್ತಾಳೆ. ತಂದೆ ವಿರೋಧಿಸುತ್ತಾರೆ. ಅಂತಿಮವಾಗಿ ತಂದೆ ಬೇಕಾ? ಪ್ರೀತಿ ಬೇಕಾ? ಅನ್ನುವ ಸ್ಥಿತಿಗೆ ಆಕೆಯದ್ದು. ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ ಅನ್ನುವುದನ್ನು ತೆರೆಯ ಮೇಲೆ ನೋಡಿದರೆ ಚೆಂದವಂತೆ.
ನಾಯಕಿ ಅರ್ಚನಾ ಈಗಾಗಲೇ ಮರ್ಮ ಚಿತ್ರದಲ್ಲಿ ನಟಿಸಿದ್ದಾರೆ. ನಾಯಕನಿಗೆ ಇದು ಹೊಸ ಚಿತ್ರ. ಸಾಯಿಕಿರಣ್ ಸಂಗೀತ ನೀಡಿದ್ದಾರೆ. ಕುನಾಲ್ ಗಂಜಾವಾಲಾ, ಶ್ರೇಯಾ ಘೋಷಾಲ್, ರಾಜೇಶ್ ಕೃಷ್ಣನ್ ಮತ್ತಿತರರು ದನಿ ನೀಡಿದ್ದಾರೆ.