ಒಂದೆರಡಲ್ಲ, ಬರೋಬ್ಬರಿ ಐವರು ನಾಯಕಿಯರನ್ನು ಒಳಗೊಂಡ ಚಿತ್ರ 'ಆಪ್ತ'. ಪೂಜಾ ಗಾಂಧಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರ ಈಗಾಗಲೇ ಶೇ. 65 ರಿಂದ 70 ಚಿತ್ರೀಕರಣವನ್ನು ಮುಗಿಸಿದೆ. ಸಂಗೀತ ನಿರ್ದೇಶಕ, ನಿರ್ದೇಶಕ, ನಟರಾಗಿ ಬಹು ಜನಪ್ರಿಯತೆ ಸಾಧಿಸಿರುವ ಸಾಧು ಈ ಚಿತ್ರದಲ್ಲಿ ಮಾಡರ್ನ್ ಭಿಕ್ಷುಕನಾಗಿ ಕಾಣಿಸಿಕೊಳ್ಳಲಿದ್ದಾನೆ.
ವಿಶೇಷವೆಂದರೆ, ಸಾಧು ಈ ಚಿತ್ರದಲ್ಲಿ ಭಿಕ್ಷೆ ನೀಡಿದವರಿಗೆ ವರ, ನೀಡದವರಿಗೆ ಶಾಪ ಸಹ ನೀಡುತ್ತಾನೆ. ಒಟ್ಟಾರೆ ಚಿತ್ರದ ಬಹುತೇಕ ಎಲ್ಲಾ ದೃಶ್ಯಗಳಲ್ಲೂ ಬರುವ ಸಾಧು, ಸಾಕಷ್ಟು ಬ್ಯುಸಿ ಆಗಿದ್ದರೂ, ಹಾಸ್ಯ ಪಾತ್ರಕ್ಕೆ ಅಸಲಿ ಜೀವ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.
ಪೂಜಾಗಾಂಧಿ, ಪೂನಂ, ಪ್ರಜ್ಞಾ ಮತ್ತಿತರರು ಈ ಚಿತ್ರದ ನಾಯಕಿಯರು. ಸಂಜಯ್ ಕುಮಾರ್ ಚಿತ್ರದ ನಿರ್ದೇಶಕರು. ಈಗಾಗಲೇ ನಾಲ್ಕೈದು ಚಿತ್ರ ನಿರ್ದೇಶಿಸಿದ್ದಾರೆ. ಮೊದಲ ಹಂತದಲ್ಲಿ ಶೇ.50ರಷ್ಟು ಚಿತ್ರೀಕರಣ ಮುಗಿಸಿರುವ ತಂಡ ಕಳೆದ ಆರು ದಿನಗಳಿಂದ ಮತ್ತೆ ಶೂಟಿಂಗ್ ಆರಂಭಿಸಿದೆ. ಚಿತ್ರದ ಒಂದು ಹಾಡಿನ ಚಿತ್ರೀಕರಣ ಮುಗಿದಿದೆ. ಸಾಹಸ ದೃಶ್ಯಗಳ ಚಿತ್ರೀಕರಣವೂ ಆಗಿದೆ. ಇನ್ನೊಂದು ಹಾಡಿನ ಚಿತ್ರೀಕರಣ ನಡೆಯಬೇಕಿದೆ. ಇವೆಲ್ಲಾ ಆಗಿ ಚಿತ್ರ ಬಿಡುಗಡೆಗೆ ಬರಲು ಕೆಲವೇ ದಿನ ಹಿಡಿಯಬಹುದು ಎನ್ನಲಾಗುತ್ತಿದೆ. ಆಪ್ತದ ಮೂಲಕ ಸಾಧು ಕೋಕಿಲಾರ ಹಾಸ್ಯ, ಪೂಜಾ ಗಾಂಧಿಯ ಬೆಡಗು ಚಿತ್ರರಸಿಕರಿಗೆ ಮತ್ತಷ್ಟು ಆಪ್ತವಾಗುತ್ತದೋ ಕಾಯಬೇಕು.