'ಚೆಲುವೆಯೇ ನಿನ್ನ ನೋಡಲು'ನಲ್ಲಿ ಟಿಕ್ ಟಿಕ್ ಹಾಗೂ ಟುವ್ವಿ ಟುವ್ವಿ!
PR
ನಮ್ಮ ಶಿವಣ್ಣ ಒಂದರ ಮೇಲೊಂದು ಚಿತ್ರ ನೀಡುತ್ತಲೇ ಇದ್ದಾರೆ. 49ರ ಹರೆಯ ದಾಟಿದರೂ, ಮೊನ್ನೆ ಮೊನ್ನೆ ಮೈಲಾರಿಯಲ್ಲಿ ಕಾಲೇಜು ಹುಡುಗನ ಗೆಟಪ್ಪಿನಲ್ಲೂ ಕಂಡಿದ್ದಾರೆ. ಅದೆಲ್ಲಾ ಒಂದೆಡೆ ಇರಲಿ, ಈಗ ಅವರ ಹುಟ್ಟು ಹಬ್ಬದ ಹೊತ್ತಿಗೆ ಬಿಡುಗಡೆ ಕಾಣುವಂತೆ ಒಂದು ಚಿತ್ರವನ್ನೂ ಪೂರೈಸಿಕೊಟ್ಟಿದ್ದಾರೆ.
ಸಮಯಪಾಲನೆ, ಶಿಸ್ತು, ಅಚ್ಚುಕಟ್ಟುತನಕ್ಕೆ ಹೇಳಿ ಮಾಡಿಸಿದ ವ್ಯಕ್ತಿ ಶಿವಣ್ಣ. ಎಲ್ಲವನ್ನೂ ಕ್ರಮಬದ್ಧವಾಗಿಸಿಕೊಂಡು ದಿನ ನೀಡುತ್ತಾರೆ. ಇವರ ಸದ್ಯ ತೆರೆ ಕಾಣಲಿರುವ ಚಿತ್ರ 'ಚೆಲುವೆಯೇ ನಿನ್ನ ನೋಡಲು' ಹತ್ತು ಹಲವು ವೈಶಿಷ್ಟ್ಯಗಳನ್ನು ಹೊತ್ತಿದೆ. ರಾಜ್ ಗೆಟಪ್ಪಿನಲ್ಲಿ ಮಿಂಚುವ ಪ್ರಯತ್ನ ಒಂದೆಡೆಯಾದರೆ, ವಿಶ್ವದ ಏಳು ಅದ್ಭುತಗಳಲ್ಲಿ ಕುಣಿದಾಡಿ ಬಂದಿದ್ದು ಮತ್ತೊಂದು ವಿಶೇಷ. ಜೊತೆಗೆ ರಾಜ್ ಹಾಡಿದ ಹಾಡಿನಲ್ಲೂ ಕುಣಿದಿದ್ದಾರೆ. ಹಾಗಾಗಿ ರಾಜ್ ಹಾಗೂ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಈ ಚಿತ್ರವೊಂದು ಹಬ್ಬವೇ ಸರಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಶಿವಣ್ಣನ ಎವರ್ ಗ್ರೀನ್ ಚಿತ್ರ ಆನಂದ್. ಇದರ ಎರಡು ಹಾಡುಗಳಾದ 'ಟಿಕ್ ಟಿಕ್ ಟಿಕ್ ಬರುತಿದೆ ಕಾಲ...' ಹಾಗೂ 'ಟುವ್ವಿ ಟುವ್ವಿ ಎಂದು ಹಾಡುವ...'ಯನ್ನು ಒಂದಿಷ್ಟು ರಿಮೇಕ್ ಮಾಡಿ ಇದೀಗ ಚೆಲುವೆಯೇ ನಿನ್ನ ನೋಡಲು ಚಿತ್ರದ ಹಾಡೊಂದರಲ್ಲಿ ಮತ್ತೆ ಸೇರಿಲಾಗಿದೆ.
'ಚಿತ್ರದ ಒಂದು ಹಾಡಿಗೆ ಕೊಂಚ ಗಿಮಿಕ್ ಬೇಕಿತ್ತು. ಆದ್ದರಿಂದ ಈ ಮೇಲಿನ ಹಾಡುಗಳ ಸಾಲನ್ನು ಬಳಸಿಕೊಳ್ಳಲಾಗಿದೆ. ಚಿತ್ರ ವೀಕ್ಷಿಸಿದಾಗ ನಿಮಗೆ ಅದರ ಅಗತ್ಯದ ಅರಿವು ಆಗಲಿದೆ. ವಿದೇಶದಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡಿಗೆ ನಾನು ಹಾಗೂ ಸೋನಾಲ್ ಚೌಹಾಣ್ ಹೆಜ್ಜೆ ಹಾಕಿದ್ದೇವೆ. ನಿಜಕ್ಕೂ ಒಂದು ಉತ್ತಮ ಚಿತ್ರ. ವಿದೇಶದಲ್ಲಿ ಚಿತ್ರೀಕರಣ ಮಾಡುವಾಗ ಸಾಕಷ್ಟು ಕಷ್ಟ ಪಟ್ಟಿದ್ದೇವೆ' ಎನ್ನುತ್ತಾರೆ ನಾಯಕ ಶಿವರಾಜ್ ಕುಮಾರ್.
ಚಿತ್ರಕ್ಕೆ ಹರಿಕೃಷ್ಣ ಸಂಗೀತ ಹಾಗೂ ಪರ್ವಿನ್ ಲಾಲ್ ಛಾಯಾಗ್ರಹಣ ಲಭಿಸಿದೆ. ರಘುರಾಮ್ ಉತ್ತಮ ನಿರ್ದೇಶನವೂ ಚಿತ್ರಕ್ಕಿದೆ. ಎನ್.ಎಂ. ಸುರೇಶ್ ಬಿಗ್ ಬಜೆಟ್ಟಿನಲ್ಲಿ ಚಿತ್ರ ನಿರ್ಮಿಸಿದ್ದಾರೆ. ಗೈಡ್ ಒಬ್ಬ ಎಲ್ಲರ ಬಾಳಿಗೂ ಮಾರ್ಗದರ್ಶಿ ಅಗಿರುತ್ತಾನೆ. ಆದರೆ ಅವನ ಜೀವನದ ನಿರ್ಧಾರ ಕೈಗೊಳ್ಳಬೇಕಾಗಿ ಬಂದಾಗ ಏನು ಮಾಡುತ್ತಾನೆ ಅನ್ನುವುದನ್ನೇ ರಂಜನೆಯ ಜತೆ ನೀಡಲಾಗಿದೆ. ಚಿತ್ರದಲ್ಲಿ ಜೀವನದ ಕುರಿತು ಒಂದು ಸಂದೇಶವನ್ನು ಸಹ ನೀಡಲಾಗಿದೆಯಂತೆ. ಚಿತ್ರದಲ್ಲಿ ಹರಿಪ್ರಿಯಾ ಕೂಡಾ ಇದ್ದಾರೆ.