ನಮ್ಮ ಕನ್ನಡದ 'ಮಂಡ್ಯದ ದಿಟ್ಟ ಬೆಡಗಿ' ರಮ್ಯಾ ಬೈಕಿಂದ ಬಿದ್ದು ಹೋದ್ರಂತೆ. ಯಾಪ್ಪಾ ಶಿವನೇ, ಆರಾಮಾಗಿದ್ದಾರೆ ತಾನೇ ಅಂತ ರಾಗ ಎಳೆಯಬೇಡ್ರೀ. ಬೇಡ ಬೇಡ ಅಂದ್ರೂ ಆ ಲೂಸ್ ಮಾದ ಅಲ್ಲಲ್ಲ ಯೋಗೀಶ್ ಬೈಕ್‌ನಿಂದೇನಾದ್ರೂ ಬಿದ್ರಾ.. ಹೇಗಂತೆ ಅಂತೆಲ್ಲಾ ನೀವೇ ಅಂತೆಕಂತೆಗಳನ್ನು ಸೃಷ್ಟಿಸಿಕೊಂಡು ಪ್ರಶ್ನೆಗಳ ಪಮಳೆಗರೆಯುವುದು ಬೇಡ. ಲೂಸ್ ಜೊತೆ ಬೈಕಿಂದ ಖಂಡಿತಾ ರಮ್ಯಾ ಬಿದ್ದಿಲ್ಲ. ಬದಲಾಗಿ ಗೆಳತಿಯರ ಜೊತೆಗೆ ಬೈಕ್ ಏರಿ ಆಯ ತಪ್ಪಿ ಬಿದ್ದಿದ್ದಾರಂತೆ ಎಂಬ ಸುದ್ದಿಯೀಗ ಗಾಂಧಿನಗರಿಯಲ್ಲಿ ಬಿಸಿಬಿಸಿಯಾಗಿ ಹರಿದಾಡುತ್ತಿದೆ.
ಮೂಲಗಳ ಪ್ರಕಾರ ರಮ್ಯಾ, ಇತ್ತೀಚೆಗೆ ಗೆಳತಿಯರ ಜತೆ ಬೈಕಿನಲ್ಲಿ ಹೋಗುತ್ತಿದ್ದಾಗ ಜಾರಿ ಬಿದ್ದರಂತೆ. ಒಟ್ಟಿಗೆ ನಾಲ್ಕಾರು ಬೈಕ್ ಹೋಗುತ್ತಿದ್ದವು, ಅದರಲ್ಲಿ ಒಂದು ಬೈಕ್ ಇವರ ಕೈ ಮೇಲೆ ಹತ್ತಿ ಬಿಟ್ಟಿದೆ. ಕೈಗೆ ಬಲವಾದ ಏಟು ತಗುಲಿದ್ದು, ಮುಂಬೈಗೆ ಹೋಗಿ ಟ್ರೀಟ್‌ಮೆಂಟ್ ಪಡೆದಿದ್ದಾರೆ. ಆದಷ್ಟು ಬೇಗ ವಾಸಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇದೆಲ್ಲಾ ಹೌದಾ ಎಂದು ನೇರವಾಗಿ ರಮ್ಯಾರನ್ನು ಕೇಳೋಣವೆಂದರೆ ಆಕೆ ಫೋನಿಗೇ ಸಿಗುತ್ತಿಲ್ಲ. 15 ದಿನಗಳಿಂದ ರಮ್ಯಾ ಗಾಂಧಿನಗರದಲ್ಲಿ ಎಲ್ಲೂ ಕಾಣಿಸುತ್ತಿಲ್ಲ ಎಂದು ಹೇಳಲಾಗಿದೆ. ಆದರೆ ಇದೆಲ್ಲಾ ಸುಳ್ಳು ಸುದ್ದಿ ಎಂದೂ ಇನ್ನೊಂದು ವರ್ಗ ಹೇಳುತ್ತಿದೆ. ರಮ್ಯಾಗೆ ಆಗದ ಮಂದಿ ಯಾರೋ ಹೀಗೆ ಸುಳ್ಳು ಸುದ್ದಿ ಹಬ್ಬಿಸಿರಬಹುದು ಎಂಬುದು ಕೆಲವರ ಗುಮಾನಿ. ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಮೊನ್ನೆ ಮೊನ್ನೆಯವರೆಗೂ ನಟಿಸಿ ಹೋಗಿದ್ದಾರೆ. ಮೂರು ದಿನದ ಹಿಂದೆಯಷ್ಟೆ ನಾವು ನೋಡಿದ್ವಿ ರಮ್ಯಾರನ್ನು. ಎಲ್ಲೋ ಆರಾಮವಾಗಿ ನಿರಾಳವಾಗಿರಲು ಹೋಗಿರುತ್ತಾರೆ, ಅಷ್ಟೇ ಎನ್ನುತ್ತಿದೆ ಸಂಜು ವೆಡ್ಸ್ ಗೀತಾ ಚಿತ್ರತಂಡ. ಏನೋಪ್ಪಾ, ಸುದ್ದಿ ಹಬ್ಬಿದ್ದಂತೂ ನಿಜ ಬಿಡಿ.