ಹೌದು. ಇದೀಗ ರವಿಚಂದ್ರನ್ ನಾರಿಯ ಸೀರೆ ಕದ್ದಿದ್ದಾರೆ. ರವಿಚಂದ್ರನ್‌ಗೇಕೆ ಈ ಕೇಡುಗಾಲ ಬಂತಪ್ಪಾ ಅಂತ ಹುಬ್ಬೇರಿಸಬೇಡಿ. ವಿಷಯ ಸಿಂಪಲ್. ಹೂ ಚಿತ್ರ ಖುಷಿಯಲ್ಲಿ ಮುಳುಗೇಳುತ್ತಿರುವ ರವಿಚಂದ್ರನ್ ಅವರ ಸಾಲು ಸಾಲು ಚಿತ್ರಗಳು ಸದ್ಯದಲ್ಲೇ ಸೆಟ್ಟೇರಲಿದ್ದು, ಅವುಗಳ ಪೈಕಿ ಒಂದು ಇದೇ ಜುಲೈ 9ರಂದು ಸೆಟ್ಟೇರಲಿದೆ. ಚಿತ್ರದ ಹೆಸರು ನಾರಿಯ ಸೀರೆ ಕದ್ದ. ನಾಯಕಿ ನಿಖಿತಾ.
ನಾರಿಯ ಸೀರೆ ಕದ್ದ ಎಂಬ ವಿಶೇಷ ಹೆಸರಿಟ್ಟುಕೊಂಡು ರವಿಚಂದ್ರನ್ ಇದೀಗ ಚಿತ್ರಕಥೆಯನ್ನು ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್ ಅವರೇ ಸ್ವತಃ ನಟಿಸಲಿದ್ದು, ಅವ ಜೊತೆಗೆ ದಿಗಂತ್ ಹಾಗೂ ರಮೇಶ್ ಅರವಿಂದ್ ಕೂಡಾ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಚಿತ್ರವನ್ನು ಮೊಬೈಲ್ ಕುಮಾರ್ ನಿರ್ಮಿಸಲಿದ್ದು, ಇವರು ಈ ಹಿಂದೆ ತರಂಗಿಣಿ ಹಾಗೂ ಕೆಲವು ಕಡಿಮೆ ಬಜೆಟ್ಟಿನ ಚಿತ್ರಗಳನ್ನು ನಿರ್ಮಿಸಿದ್ದರು. ಇದೀಗ ಮೊದಲ ಬಾರಿಗೆ ದೊಡ್ಡ ಬಜೆಟ್ಟಿನ ಚಿತ್ರ ಕೈಗೆತ್ತಿಕೊಂಡಿದ್ದಾರೆ.
ಈ ಚಿತ್ರಕ್ಕೆ ಗ್ಲ್ಯಾಮರಸ್ ನಟಿ ನಿಖಿತಾ ನಾಯಕಿಯಾಗಿದ್ದು, ಮತ್ತೆ ಪ್ರೇಕ್ಷಕರ ಕುತೂಹಲ ಗರಿಗೆದರಿದೆ. ಹೂ ಚಿತ್ರದಲ್ಲಿ ಗ್ಲ್ಯಾಮರಸ್ ನಮಿತಾರನ್ನು ಕಣ್ತುಂಬಿಕೊಂಡಿದ್ದ ರವಿಮಾಮನ ಅಭಿಮಾನಿಗಳು ಇದೀಗ ನಿಖಿತಾಗಾಗಿ ಕಾಯುತ್ತಿದ್ದಾರೆ. ಚಿತ್ರಕ್ಕೆ ವಿ.ಮನೋಹರ್ ಸಂಗೀತವಿದೆ. ಈ ಹಿಂದೆ ರವಿಚಂದ್ರನ್ ಅವರ ಮಾಂಗಲ್ಯಂ ತಂತು ನಾನೇನ ಎಂಬ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದರು. ಇದೀಗ ಬಹುಕಾಲದ ನಂತರ ಮತ್ತೆ ಮನೋಹರ್ ಕ್ರೇಜಿಸ್ಟಾರ್ ಬಳಗ ಸೇರಿಕೊಳ್ಳಲಿದ್ದಾರೆ.
ಗ್ಲ್ಯಾಮರಸ್ ನಿಖಿತಾ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...