ಅದೇನೋ ಕಾಣೆ, ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದ ಚಿತ್ರಗಳೆಲ್ಲಾ ತೋಪೇಳುತ್ತಿವೆ. ಹೇಗಾದರೂ ಸರಿ, ಸ್ವಂತ ಬ್ಯಾನರ್ ಅಡಿ ಚಿತ್ರ ನಿರ್ಮಿಸೋಣ ಅಂತ ಮಳೆಯಲಿ ಜೊತೆಯಲಿ ಮಾಡಿದರು. ಭರಾಜರಿ ಹಿಟ್ ಅಲ್ಲದಿದ್ದರೂ, ಪರವಾಗಿಲ್ಲ ಅನಿಸಿಕೊಂಡಿತು. ಆದರೆ ಯಶಸ್ಸು ದಕ್ಕಲಿಲ್ಲ. ಇದೀಗ ಯಶಸ್ಸಿನ ಕುದುರೆಯ ಬೆನ್ನು ಹತ್ತಿ ಕೂಲ್ ಆಗಿದ್ದಾರೆ. ಆದರೆ ಕೂಲ್ ಆಗಿ ಸಕತ್ ಹಾಟ್ ಮಗಾ ಅನ್ನುತ್ತಿದ್ದಾರೆ.
ಹೌದು. ಪತ್ನಿ ಶಿಲ್ಪಾ ಗಣೇಶ್ ನಿರ್ಮಾಣದ ಕೂಲ್ ಚಿತ್ರಕ್ಕಾಗಿ ಗಣೇಶ್ ಹರ ಸಾಹಸ ನಡೆಸುತ್ತಿದ್ದಾರೆ. ಇದಕ್ಕಾಗಿ ತಮಿಳಿನ ಜನಪ್ರಿಯ ಚಿತ್ರ ರಜನಿಕಾಂತ್ ಹಾಗೂ ಐಶ್ವರ್ಯ ರೈ ಅಭಿನಯದ 'ರೋಬೋ' ಚಿತ್ರದ ಛಾಯಾಗ್ರಾಹಕ ರತ್ನವೇಲು ಅವರನ್ನು ಕನ್ನಡಕ್ಕೆ ಕರೆತಂದಿದ್ದಾರೆ.
ಕನ್ನಡಕ್ಕೆ ಬಂದಿರುವ ರತ್ನವೇಲು, ಅಲ್ಲಿ ಬಳಸಿದ್ದ ಆಧುನಿಕ ಉಪಕರಣಗಳನ್ನೆಲ್ಲಾ ಇಲ್ಲಿಯೂ ಬಳಸುವುದಾಗಿ ಹೇಳಿದ್ದಾರೆ. ಈ ಮೂಲಕ ಕನ್ನಡದಲ್ಲೊಂದು ಅದ್ಬುತ ಕ್ಯಾಮರಾ ಕೈಚಳಕ ತೋರಿಸುವ ಕರಾಮತ್ತನ್ನು ಗಣೇಶ್ ನಡೆಸಿದ್ದಾರೆ. 'ಸಕತ್ ಹಟ್ ಮಗಾ' ಅನ್ನುವ ಅಡಿ ಶೀರ್ಷಿಕೆ ಒಳಗೊಂಡಿರುವ ಈ ಚಿತ್ರ ಸಂಪೂರ್ಣ ಗಣೇಶ್ ಇಮೇಜನ್ನೇ ವಿಭಿನ್ನವಾಗಿ ತೋರಿಸುವ ಕಾರ್ಯ ಮಾಡಲಿದೆಯಂತೆ. ವರ್ಷಕ್ಕೊಂದು ಸ್ವಂತ ಬ್ಯಾನರ್ ಅಡಿ ಚಿತ್ರ ನಿರ್ಮಿಸುವ ಅವರ ಉದ್ದೇಶದ ಎರಡನೇ ಕೊಡುಗೆ ಇದಾಗಿದೆ. ಚಿತ್ರದ ಮುಹೂರ್ತ ಮುಗಿದಿದ್ದು, ಶೂಟಿಂಗ್ ಆರಂಭವಾಗಿದೆ.
ಕೂಲ್ ಚಿತ್ರದ ವಿಭಿನ್ನ ಭಾವಚಿತ್ರವನ್ನು ಪತ್ರಿಕಾಗೋಷ್ಠಿ ಕರೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಗಣೇಶ್ ನಿಜಕ್ಕೂ ಇದರಲ್ಲಿ ಅನನ್ಯತೆ ಮೆರೆದಿದ್ದಾರೆ. ಹತ್ತು ಹಲವು ಏಳು ಬೀಳುಗಳ ನಂತರವಾದರೂ ಇವರ ಕೂಲ್ ಸಕತ್ ಹಾಟ್ ಆಗಿ ಓಡಲಿ ಅಂತ ಆಶಿಸೋಣ.