ರಮ್ಯಾ ತನ್ನ ಬಹುದಿನಗಳ ಕನಸನ್ನು ಕೊನೆಗೂ ನನಸಾಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಭವ್ಯವಾದ ಬಂಗಲೆಯೊಂದನ್ನು ಕಟ್ಟಿ ಅಲ್ಲಿ ಆರಾಮವಾಗಿ ತನ್ನ ದಿನಗಳನ್ನು ಕಳೆಯಬೇಕೆಂಬ ರಮ್ಯಾರ ಕನಸು ಕೈಗೂಡಿದೆ. ಆದರೆ ಮನೆಯಲ್ಲಿ ಆರಾಮವಾಗಿ ಕಳೆಯಲು ಸಮಯ ಮಾತ್ರ ಅವರಲ್ಲಿ ಇಲ್ಲವಂತೆ. ಅದಕ್ಕೆ ಅವರಿಗೆ ಸಿಕ್ಕಾಪಟ್ಟೆ ಬೇಜಾರು.
ಅದೇನೇ ಇರಲಿ. ರಮ್ಯಾ ನಾಲ್ಕು ಬೆಡ್‌ರೂಂಗಳುಳ್ಳ ಚೆಂದದ ಮನೆಯೊಂದನ್ನು ಬೆಂಗಳೂರಿನ ಲಾವೆಲ್ಲೆ ರಸ್ತೆಯಲ್ಲಿ ಕಟ್ಟಿಸಿದ್ದಾರೆ. ಲಾವೆಲ್ಲೆ ರಸ್ತೆ ಬೆಂಗಳೂರಿನ ಪ್ರತಿಷ್ಟಿತ ಏರಿಯಾಗಳಲ್ಲೊಂದು. ಇಲ್ಲಿ ಪ್ರತಿ ಚದರ ಅಡಿ ಭೂಮಿಯ ಬೆಲೆಯೇ 14 ಸಾವಿರ ರೂಗಳಿಗಿಂತಲೂ ಹೆಚ್ಚು. ಅಂಥದ್ದರಲ್ಲಿ, ರಮ್ಯಾ ಅದೇ ಏರಿಯಾದಲ್ಲಿ ಸುಂದರ ನಾಲ್ಕು ಬೆಡ್ ರೂಂಗಳುಳ್ಳ ಭಾರೀ ಭವ್ಯ ಬಂಗಲೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ! ಈ ಮನೆಯಲ್ಲಿ ಅಮ್ಮನ ಜೊತೆ ಕಾಲ ಕಳೆಯಬೇಕೆಂಬ ಆಸೆ ಅವರದ್ದು.
ಇತ್ತೀಚೆಗೆ ಅಂದರೆ ಮೊನ್ನೆ ಜೂ.24ರಂದು ರಮ್ಯಾ ತಮ್ಮ ಮನೆಯ ಗೃಹಪ್ರವೇಶ ಮಾಡಿಕೊಂಡಿದ್ದಾರೆ. ಕೊನೆಗೂ ತನ್ನ ಕನಸು ನನಸಾದುದಕ್ಕೆ ರಮ್ಯಾಗೆ ಅತೀವ ಸಂತೋಷವಿದೆ. ಬೆಂಗಳೂರಲ್ಲಿ ತನ್ನದೇ ಎಂಬ ಮನೆಯೊಂದನ್ನು ಹೊಂದಬೇಕು ಎಂದು ಎಷ್ಟೋ ದಿನಗಳಿಂದ ಅಂದುಕೊಂಡಿದ್ದೆ. ಅದೀಗ ನನಸಾಗಿದೆ. ಈ ಮನೆಯಲ್ಲಿ ಆರಾಮವಾಗಿ ಕಾಲ ಕಳೆಯಬೇಕೆಂಬ ಆಸೆಯೇನೋ ಇದೆ. ಆದರೇನು ಮಾಡೋಣ. ಸಿನಿಮಾ ಚಿತ್ರೀಕರಣದ ಬ್ಯುಸಿನಲ್ಲಿ ಆರಾಮವಾಗಿ ಮನೆಯಲ್ಲಿ ಕೂರಲು ಟೈಮೇ ಇಲ್ಲ ಎಂದು ಪೆಚ್ಚು ಮೋರೆ ಹಾಕುತ್ತಾರೆ ರಮ್ಯಾ. ಅಷ್ಟೇ ಅಲ್ಲ, ಈ ಮನೆ ಕಟ್ಟುವಷ್ಟರಲ್ಲಿ, ದುಡ್ಡೆಲ್ಲಾ ಖಾಲಿ ಅಂತನೂ ಹೇಳೋದಕ್ಕೆ ಮರೆಯಲ್ಲ ಈ ಬಿಂಕದ ಸಿಂಗಾರಿ.
ಕಳೆದ ವರ್ಷ ರಮ್ಯಾ ಅಭಿನಯದ ಒಂದೇ ಒಂದು ಚಿತ್ರವೂ ತೆರೆ ಕಾಣದಿದ್ದರೂ, ಈ ಬಾರಿ ಹಲವು ಚಿತ್ರಗಳು ರಮ್ಯಾ ಕೈಯಲ್ಲಿವೆ. ಆ ಮೂಲಕ ರಮ್ಯಾ ಈಗಲೂ ಬೇಡಿಕೆಯಲ್ಲಿರುವ ನಟಿ ಎಂದು ಸಾಬೀತುಪಡಿಸಿದ್ದಾರೆ. ಸಿದ್ಧಲಿಂಗು, ಲೂಸ್ ಮಾದ, ಸಂಜು ವೆಡ್ಸ್ ಗೀತಾ, ದಂಡಂ ದಶಗುಣಂ ಚಿತ್ರಗಳು ಸದ್ಯ ರಮ್ಯಾ ಕೈಯಲ್ಲಿರುವ ಚಿತ್ರಗಳು. ಸಂಜು ವೆಡ್ಸ್ ಗೀತಾ ಚಿತ್ರ ಈಗಾಗಲೇ ತನ್ನ ಚಿತ್ರೀಕರಣ ಮುಗಿಸಿದ್ದು, ಹೊರಬರಲು ಸಿದ್ಧವಾಗಿದೆ. ಇನ್ನುಳಿದಂತೆ, ಕಿಚ್ಚ ಹುಚ್ಚ, ಜೊತೆಗಾರ, ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರಗಳು ತಮ್ಮ ಚಿತ್ರೀಕರಣ ಮುಗಿಸಿದ್ದರೂ, ಕೆಲ ಕಾರಣಗಳಿಂದ ಇನ್ನೂ ಹೊರಬರದೆ ಡಬ್ಬದಲ್ಲೇ ಕೂತಿವೆ. ಕಿಚ್ಚ ಹುಚ್ಚ ಚಿತ್ರ ಶೀಘ್ರವೇ ಬಿಡುಗಡೆ ಕಾಣುವ ಸೂಚನೆಗಳಿವೆ. ಕನ್ನಡದ ಲಕ್ಕಿ ಗರ್ಲ್ ರಮ್ಯಾಗೆ ಈ ಮೂಲಕ ಶುಭಕೋರೋಣ.