'ನನ್ನಾಸೆಯಾ ಹೂವೆ...' ಚಿತ್ರದ ನಾಯಕ ವಿನಾಯಕ ಜೋಶಿ ನಿಮಗೆಲ್ಲಾ ಗೊತ್ತೇ ಇರಬೇಕು. ಗೇಣುದ್ದ ಇರುವಾಗಲೇ ಚಿತ್ರದಲ್ಲಿ ನಟಿಸಿ ಹೆಸರು ಮಾಡಿದ ನಟ. ಅವರೂ ಸಹ ಇತ್ತೀಚೆಗೆ ಎಲ್ಲೂ ಕಾಣಿಸುತ್ತಿಲ್ಲ.
ಜೀವಕ್ಕೆ ಜೀವದಂತಿದ್ದ ಅಪ್ಪ ಹೋದ ಮೇಲೆ ಸಿನೆಮಾ ಆಸೆಯೂ ಕಮರಿತು. ಎಫ್ಎಂ ರೇಡಿಯೊವೊಂದರಲ್ಲಿ ಜಾಕಿಯಾಗಿರುವ (ಆರ್‌ಜೆ) ಹುಡುಗ ಏನಾದರೂ ಹೊಸದು ಮಾಡಬೇಕೆಂಬ ತುಡಿತದಿಂದ ಈಗ ರಂಗಭೂಮಿಯತ್ತ ಹೊರಳಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೆ ಇವರು ಹೊಸದಾಗಿಯೇನೂ ರಂಗಭೂಮಿಯತ್ತ ಹೊರಳಿಲ್ಲ. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿ, ನಿರ್ದೇಶಿಸಿದ ಅನುಭವ ಬೆನ್ನಿಗಿದೆ. ಕೆಲಕಾಲ 'ಬಿಂಬ' ತಂಡದಲ್ಲಿದ್ದರು. ಲಂಕೇಶರ 'ಪೊಲೀಸರಿದ್ದಾರೆ ಎಚ್ಚರಿಕೆ' ನಾಟಕವನ್ನು ಭಿನ್ನ ಆಯಾಮ ಇಟ್ಟುಕೊಂಡು ನಿರ್ದೇಶಿಸಿದ್ದರು ಕೂಡ.
'ಜಯಂತನ ಸ್ವಗತ' ಏಕವ್ಯಕ್ತಿ ಪ್ರದರ್ಶನ ಭಾರಿ ಯಶಸ್ಸು ಕಂಡಿತ್ತು. ಇದೀಗ ಅವರ ನಿರ್ದೇಶನದ ನಾಟಕ 'ಶ್ರದ್ದಾ'. ಅದರ 27ನೇ ಪ್ರದರ್ಶನದ ಸಿದ್ಧತೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. ನಾಟಕವನ್ನು ಇಷ್ಟಪಡುವುದಾದರೆ ನಾಳೆ ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದ್ದು, ಹೋಗಿ ವೀಕ್ಷಿಸಿ ಸಂತಸ ಪಡಬಹುದು.