ಆರಂಭಕ್ಕೂ ಮುನ್ನವೇ ವಿವಾದದ ಮೂಲಕ ಸಾಕಷ್ಟು ಸುದ್ದಿ ಮಾಡಿದ ಪ್ರೇಮ ಚಂದ್ರಮ ಚಿತ್ರಕ್ಕೆ ಕೊನೆಗೂ ಚಾಲನೆ ದೊರೆತಿದೆ. ಪ್ರೇಮ್ ಹಾಗೂ ನಿಖಿತಾ ಜಾಗಕ್ಕೆ ರಘು ಮುಖರ್ಜಿ ಹಾಗೂ ರೇಖಾ ಬಂದಿದ್ದಾರೆ. ನಿರ್ದೇಶಕ ಶಾಹುರಾಜ್ ಶಿಂಧೆ, ನಾಯಕಿಯಿಂದ ಆರಂಭವಾಗುವ ಈ ಚಿತ್ರ ನಾಯಕಿಯಿಂದಲೇ ಕೊನೆಗೊಳ್ಳುತ್ತದೆ ಅನ್ನುವ ಮೂಲಕ ಚಿತ್ರದ ಒಂದೇ ಎಳೆಯನ್ನು ಬಿಚ್ಚಿಟ್ಟರು.
ಕೊನೆಯದಾಗಿ ಪತ್ರಕರ್ತರು ಪ್ರೇಮ ಚಂದ್ರಮ ಕೈಗೆ ಸಿಗುವುದೇ? ಎಂದು ಕೇಳಿದಾಗ, ಸ್ಪಷ್ಟ ಉತ್ತರವನ್ನು ಮಾತ್ರ ನೀಡಲಿಲ್ಲ. ಎಲ್ಲಾ ಗೊತ್ತಾಗಲು ಚಿತ್ರ ತೆರೆಕಾಣಬೇಕು ಎಂದು ಹೇಳಿ ಸುಮ್ಮನಾದರು. ಇದಕ್ಕೆ ನಿರ್ಮಾಪಕರಾದ ಜಗದೀಶ್ ಕುಮಾರ್, ಗಣೇಶ್, ಸುನೀಲ್ ಕುಮಾರ್ ಶಿಂದೆ ಸಹ ತಲೆದೂಗಿಬಿಟ್ಟರು.
ಹೀಗೆ ಚಿತ್ರದ ಮಾತುಕತೆ ನಡೆದದ್ದು ಕಂಠೀರವ ಸ್ಟುಡಿಯೋದಲ್ಲಿ. ಮೊನ್ನೆ ನಡೆದ ಚಿತ್ರದ ಶುಭ ಮುಹೂರ್ತದಲ್ಲಿ ಪಾಲ್ಗೊಂಡಿದ್ದ ನಾಯಕಿ ರೇಖಾ ಮಾತನಾಡಿ, ತ್ರಿಕೋನ ಪ್ರೇಮಕಥೆಯ ಚಿತ್ರದಲ್ಲಿ ತಾನು ನಟಿಸುತ್ತಿರುವುದು ಇದೇ ಮೊದಲ ಸಲ ಎಂದರು.
ಅಂದಹಾಗೆ ನಾಯಕ ರಘು ಮುಖರ್ಜಿಗೆ ಇದು ಬಯಸದೇ ಬಂದ ಭಾಗ್ಯ. ಪ್ರೇಮ್ ಮಾಡಬೇಕಿದ್ದ ಪಾತ್ರವನ್ನು ರಘು ಮಾಡುತ್ತಿದ್ದಾರೆ. ಪಾತ್ರ ಚೆನ್ನಾಗಿದೆ. ಹಾಗಾಗಿ ಒಪ್ಪಿಕೊಂಡೆ ಎನ್ನುತ್ತಾರೆ ರಘು. ಹಾಗೇ ಸುಮ್ಮನೆ ಚಿತ್ರದಲ್ಲಿ ನಟಿಸಿದ್ದ ಕಿರಣ್ ಇಲ್ಲಿ ಡಾಕ್ಟರ್ ಪಾತ್ರ ಮಾಡುತ್ತಿದ್ದಾರೆ. ಅವರ ಪ್ರಕಾರ, ಈ ಹಿಂದೆ ಈ ಥರದ ಸೀರಿಯಸ್ ಪಾತ್ರ ಮಾಡಿಲ್ಲವಂತೆ. ಎರಡೂವರೆ ಕೋಟಿ ರೂಪಾಯಿಗಳಲ್ಲಿ ಚಿತ್ರ ಮುಕ್ತಾಯ. ಚಿತ್ರಕ್ಕೆ ವೇಣು ಛಾಯಾಗ್ರಹಣವಿದ್ದು, ಬೆಂಗಳೂರು, ಮೈಸೂರು, ಸಕಲೇಶಪುರ ಮೊದಲಾದ ಕಡೆ ಚಿತ್ರೀಕರಣ ನಡೆಯಲಿದೆಯಂತೆ. ತಾರಾಬಳಗದಲ್ಲಿ ಉಮಾಶ್ರೀ, ಚಿತ್ರಾ ಶೆಣೈ, ಶ್ರೀನಾಥ್, ಗಣೇಶ್ ಮೊದಲಾದವರಿದ್ದಾರೆ.