ಮಾಸ್ಟರ್ ಕಿಶನ್ ವಯಸ್ಸಿನ್ನೂ 15 ತುಂಬಿಲ್ಲ. ಅಷ್ಟರಲ್ಲೇ ಗರ್ಲ್‌ಪ್ರೆಂಡ್!
ಅರೆರೆ, ಕಿಶನ್‌ಗೆ ಈಗಲೇ ಗರ್ಲ್‌ಫ್ರೆಂಡಾ ಎಂದು ಹುಬ್ಬೇರಿಸಬೇಡಿ. ಇದು ನಿಜ ಜೀವನದ ಮಾತಲ್ಲ. ಸಿನಿಮಾದ ಮಾತು.
ಹೌದು. 9ರ ಹರೆಯದಲ್ಲಿ ಕೇರಾಫ್ ಫುಟ್‌ಪಾತ್ ಚಿತ್ರವನ್ನು ನಿರ್ದೇಶಿಸಿ ಶಹಬ್ಬಾಸ್ ಗಿರಿಗಳ ಸುರಿಮಳೆಯನ್ನೇ ಪಡೆದು ರಾಶಿ ರಾಶಿ ಪ್ರಶಸ್ತಿ, ದಾಖಲೆಗಳ ಗುಂಗಿನಲ್ಲಿದ್ದ ಈ ಕಿಶನ್ ಎಂಬ ಪೋರ ಈಗ ಮತ್ತೊಂದು ಚಿತ್ರ ಮಾಡಲು ಅಡಿಯಿಟ್ಟಿದ್ದಾರೆ. ಚಿತ್ರದ ಹೆಸರು 15. ವಿಶೇಷವೆಂದರೆ, ಈ ಚಿತ್ರದಲ್ಲಿ ಕಿಶನ್ ಲವ್ ಮಾಡಲಿದ್ದಾರೆ. ಚಿತ್ರದ ಕಥೆಯಿಡೀ ಕಿಶನ್, ಆತನ ಗರ್ಲ್‌ಫ್ರೆಂಡ್ ಹಾಗೂ ಸಹೋದರಿಯ ಸುತ್ತ ಸುತ್ತುತ್ತದಂತೆ!
IFM
ಕಿಶನ್ ತನ್ನ ಮತ್ತೊಂದು ಚಿತ್ರಕ್ಕೆ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಇದೇ ಜು.5ರಂದು ಚಿತ್ರ ತನ್ನ ಮುಹೂರ್ತ ಆಚರಿಸಲಿದೆ. ಚಿತ್ರ ಬಿಡುಗಡೆಗೆ ಸಿದ್ಧವಾಗುವ ಸಮಯದಲ್ಲಿ ಕಿಶನ್ಗೆ 15 ವರ್ಷವಾಗಲಿದೆ. ಹಾಗಾಗಿಯೋ ಏನೋ, ಚಿತ್ರಕ್ಕೆ ಕಿಶನ್ 15 ಎಂಬ ಹೆಸರಿಟ್ಟಿದ್ದಾರೆ. ಚಿತ್ರವನ್ನು ಸಾಲ್ಟ್ ಅಂಡ್ ಪೆಪ್ಪರ್ ಎಂಟರ್‌ಟೈನ್‌ಮೆಂಟ್ ಪ್ರೈ.ಲಿಮಿಟೆಡ್ ಸಂಸ್ಥೆ ನಿರ್ಮಿಸಲಿದೆ.
ವಿಶೇಷವೆಂದರೆ ಈ ಚಿತ್ರದಲ್ಲೂ ಕಿಶನ್ ದಾಖಲೆ ಮಾಡಹೊರಟಿದ್ದಾರೆ. ಚಿತ್ರದಲ್ಲಿ ಕಿಶನ್ ಅವರದ್ದು ಹದಿಹರೆಯದ ಪ್ರೇಮವಾಗಿದ್ದು, ಈ ಪಾತ್ರದಲ್ಲಿ ಹದಿಹರೆಯದವರೇ ನಟಿಸುತ್ತಿರುವುದು ಭಾರತದಲ್ಲೇ ಇದೇ ಮೊದಲಂತೆ. ಕಿಶನ್ ಅವರ ಗರ್ಲ್‌ಫ್ರೆಂಡ್ ಪಾತ್ರದಲ್ಲಿ ಮುಂಬೈ ಮೂಲದ ರುಶಿತಾ ಕಾಣಿಸಲಿದ್ದಾರೆ. ರುಶಿಕಾ ಈಗಾಗಲೇ 90ಕ್ಕೂ ಹೆಚ್ಚು ಜಾಹಿರಾತುಗಳಲ್ಲಿ ರೂಪದರ್ಶಿಯಾಗಿದ್ದು, ಏಳು ಹಿಂದಿ ಸಿನೆಮಾಗಳಲ್ಲೂ ನಟಿಸಿದ್ದರು. ಈಕೆ ಈಗ 10ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಈ ಚಿತ್ರದಲ್ಲಿ ಕಿಶನ್ ರುಶಿತಾ ಜೊತೆಗೆ ಡ್ಯುಯೆಟ್ ಹಾಡುತ್ತಾ ಮರಸುತ್ತಲಿದ್ದಾರೆಯೇ ಎಂದು ಕಾದು ನೋಡಬೇಕು!