ಕರ್ನಾಟಕ ಟಾಕೀಸ್ ನಿರ್ಮಿಸುತ್ತಿರುವ ಚೊಚ್ಚಲು ಚಿತ್ರ ಮೊದಲಾ ಸಲ. ಇದರ ಹಲವು ಸಲದ ಚಿತ್ರೀಕರಣ ಈಗಾಗಲೇ ಮುಗಿದು ಹೋಗಿದೆ. ಇದೀಗ ಚಿತ್ರತಂಡ ಚಿತ್ರಕ್ಕೆ ಮಂಜರಿ ಸ್ಟುಡಿಯೋದಲ್ಲಿ ಡಿಟಿಎಸ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಇನ್ನೊಂದೆಡೆ ಕಾವೇರಿ ತೀರದ ಪ್ರೇಕ್ಷಣೀಯ ಸ್ಥಳಗಳು, ಕೇರಳದ ಪ್ರಸಿದ್ಧ ಜಲಪಾತಗಳ ಎದುರು ಚಿತ್ರೀಕರಣ ಸಹ ನಡೆದಿದೆ. ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು, ಜುಲೈನಲ್ಲಿ ತೆರೆಗೆ ಬರುವ ಲಕ್ಷಣ ಇದೆ.
ನವಗ್ರಹ, ಜೊತೆಜೊತೆಯಲಿ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ ಗದಗ ಪ್ರಮೋಶನ್ ಪಡೆದಿದ್ದು ನಿರ್ಮಾಪಕರಾಗಿದ್ದಾರೆ. ಇವರಿಗೆ ನಿರ್ಮಾಣ ಕಾರ್ಯದಲ್ಲಿ ಸಾಫ್ಟ್‌ವೇರ್ ಸ್ನೇಹಿತ ಯೋಗೀಶ್ ನಾರಾಯಣ್ ಸಹ ಇದ್ದಾರೆ. ಇದಲ್ಲದೇ ವೆಂಕಟೇಶ್ ನಾಯಕ್, ಜಗದೀಶ್ ಕಳಗಿ, ಮಯೂರ್ ಮತ್ತು ಮಹೇಶ್ ಪಟೇಲ್ ಸಹ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆಯುವ ಜತೆ ನಿರ್ದೇಶನದ ಹೊಣೆಯನ್ನೂ ಪುರುಷೋತ್ತಮ್ ವಹಿಸಿದ್ದಾರೆ. ಎಚ್.ಸಿ. ವೇಣು ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ, ವಿ. ನಾಗೇಂದ್ರ ಪ್ರಸಾದ್ ಗೀತರಚನೆ, ದಿನೇಶ್ ಮಂಗಳೂರು ಕಲೆ ಹಾಗೂ ಶಶಿಧರ್ ನಿರ್ಮಾಣ ನಿರ್ವಹಣೆ ಇದೆ. ತಾರಾಂಗಣದಲ್ಲಿ ಯಶ್, ಭಾಮ, ರಂಗಾಯಣ ರಘು, ಅವಿನಾಶ್, ಶರಣ್, ತಾರಾ, ಯೋಗೀಶ್ ನಾರಾಯಣ್, ರಾಕೇಶ್, ತಿಮ್ಮೇಗೌಡ ಮುಂತಾದವರಿದ್ದಾರೆ.