ಚಿತ್ರರಂಗದಿಂದ ಕೊಂಚ ದೂರಾಗಿ ಸಾಂಸಾರಿಕ ಬದುಕಿನಲ್ಲಿ ಸುಖವಾಗಿದ್ದ ಅನು ಪ್ರಭಾಕರ್ ಈಗ ಚಿತ್ರರಂಗಕ್ಕೆ ಮರಳಿದ್ದಾರೆ. ಮರಳಿದ ಇವರು ಆಯ್ಕೆ ಮಾಡಿಕೊಂಡಿದ್ದು ಪರೀಕ್ಷೆಯನ್ನು.
ಹೌದು. ಚಿತ್ರದ ಹೆಸರು ಪರೀಕ್ಷೆ. ಜೊತೆಗೆ ಇವರ ಚಿತ್ರರಂಗದ ಮರು ಪ್ರವೇಶದ ಪರೀಕ್ಷೆಯೂ ಆಗಲಿದೆ. ನಟಿಸಿದ ಮೊದಲ ಚಿತ್ರದಲ್ಲೇ ರಾಜ್ಯ ಪ್ರಶಸ್ತಿ ಬಾಚಿಕೊಂಡ ಸಹಜ ತಾರೆ ಅನು ಪ್ರಭಾಕರ್‌ಗೆ ಮರು ಪ್ರವೇಶ ಅಷ್ಟೇನು ಸುಲಭವಾಗಿ ಇಲ್ಲ. ಸಾಕಷ್ಟು ಸ್ಪರ್ಧೆ, ಪ್ರತಿರೋಧಗಳು ಎದುರಾಗಲಿವೆ. ಪ್ರಥಮ ಪ್ರವೇಶಕ್ಕಿಂತ ಮರು ಪ್ರವೇಶ ತೀರಾ ಕಷ್ಟಕರ ಎನ್ನುವುದು ಪ್ರತಿಯೊಬ್ಬ ನಟಿಮಣಿಯರಿಗೂ ಅರಿವಾಗಿದೆ. ಅದೇ ಈಗ ಅನು ಪ್ರಭಾಕರ್‌ಗೂ ಎದುರಾಗಿದೆ.
ಕನ್ನಡ ಚಿತ್ರರಂಗ ಕಂಡ ಮುದ್ದು ಮುದ್ದಾದ ನಟಿಯರಲ್ಲಿ ಅನು ಪ್ರಭಾಕರ್ ಹೆಸರು ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ತಾಯಿ ಗಾಯತ್ರಿ ಪ್ರಭಾಕರ್ರಿಂದ ಅರೆದು ಕುಡಿದಂತೆ ಬಂದಿರುವ ಅಭಿನಯ ಶೈಲಿ ಇಲ್ಲಿ ಸಾಕಷ್ಟು ಸಹಾಯವನ್ನೂ ಮಾಡಿದೆ. ಜೊತೆಗೆ ಜಯಂತಿ ಅವರ ಸೊಸೆಯಾಗಿ ಒಂದಷ್ಟು ಅಭಿನಯದ ವಾತಾವರಣವೇ ಸಿಕ್ಕಿದೆ.
ಮದುವೆ ನಂತರದಲ್ಲಿ ಅವಕಾಶಗಳಿದ್ದರೂ ಅನು ಎಲ್ಲವನ್ನೂ ಒಪ್ಪಿಕೊಳ್ಳುವುದಿಲ್ಲ. ತನಗೆ ತಕ್ಕುದಾದ ಕೆಲವೇ ಕೆಲವು ಪಾತ್ರಗಳಿಗೆ ಹೂಂ ಅನ್ನುತ್ತಾರೆ. ಹೂಂ ಅನ್ನುವ ಮೊದಲು ಗಂಡ, ಅತ್ತೆಯ ಸಲಹೆ ಪಡೆಯೋದಕ್ಕೂ ಮರೆಯಲ್ಲ. ಗುಬ್ಬಚ್ಚಿಗಳು, ಮುಸ್ಸಂಜೆ ಮಾತು, ದಾನಮ್ಮ ದೇವಿ ಇವರ ಇತ್ತೀಚಿನ ಚಿತ್ರಗಳು. ಇವೂ ಸೇರಿದಂತೆ 45ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಈ ಹಿಂದೆ ನಟಿಸಿದ್ದಾರೆ. ಸದ್ಯ ಅವರು 'ಪರೀಕ್ಷೆ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದು ಯಶಸ್ಸು ಕಾಣಲಿ ಎಂದು ಹಾರೈಸೋಣ.