ರಾಜಕೀಯ ಬದುಕಿನಲ್ಲಿ ಮಣ್ಣು ಮುಕ್ಕಿರುವ ರೆಬೆಲ್ ಸ್ಟಾರ್ ಅಂಬರೀಶ್‌ಗೆ ಈಗ ಉಳಿದಿರುವುದು ಚಿತ್ರರಂಗ ಮಾತ್ರ. ಇಲ್ಲಿ ಅವರಿಗೆ ಎಲ್ಲಾ ಕಡೆ ಮನ್ನಣೆ ಸಿಗುತ್ತಿದೆ. ರಾಜಕೀಯವಾಗಿ ಇವರನ್ನು ಪಾತಾಳಕ್ಕೆ ತಳ್ಳಿರುವ ಇದೇ ಮಂಡ್ಯದ ಜನ ಇಂದು ಅಂಬರೀಶ್‌ರ ಚಿತ್ರದ ಶೂಟಿಂಗ್ ಇದೆ ಅಂದರೆ ಮುಗಿ ಬಿದ್ದು ಬರುತ್ತಿದ್ದಾರೆ.
ರಾಜಕೀಯ ಬದುಕಿನಿಂದ ಬಹುತೇಕ ತೆರೆ ಮರೆ ಸರಿದಿರುವ ಅಂಬಿ ಮೊನ್ನೆ ಮಂಡ್ಯದಲ್ಲಿ ಚಿತ್ರದ ಶೂಟಿಂಗ್ ಇರಿಸಿಕೊಂಡಿದ್ದರು. ಅಭಿಮಾನಿಗಳ ದಂಡೇ ಅಲ್ಲಿ ಸೇರಿತ್ತು. ಮಂಡ್ಯದ ಜನರ ಪಾಲಿಗೆ ಅಂಬರೀಶ್ ಒಬ್ಬ ನಟನಾಗಿ ಬಂದರೆ ದೇವರು ಬಂದಂತೆ ಅನ್ನುವುದು ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅರಿವಾಯಿತು.
ಸದ್ಯ ಅಂಬರೀಶ್ ಎಸ್. ನಾರಾಯಣರ ವೀರ ಪರಂಪರೆ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಮಂಡ್ಯದ ಗೌಡರ ಗತ್ತು ಅವರ ತವರಿನಲ್ಲಿ ಶೂಟಿಂಗ್ ಆಗದಿದ್ದರೆ ಹೇಗೆ? ಅದೇ ನಿಟ್ಟಿನಲ್ಲಿ ಚಿತ್ರದ ಶೂಟಿಂಗ್ ಮಂಡ್ಯದಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ ಅಲ್ಲಿ ತೆರಳಿದಾಗ ಅಭಿಮಾನಿಗಳನ್ನು ನಿಯಂತ್ರಿಸುವುದೇ ದೊಡ್ಡ ಕೆಲಸವಾಗಿ ಬಿಟ್ಟಿದೆ ಚಿತ್ರ ತಂಡದವರಿಗೆ.
ಚಿತ್ರದ ಹಾಡಿನ ತುಣುಕೊಂದನ್ನು ಚಿತ್ರೀಕರಿಸಲು ಹೋದ ನಾರಾಯಣ್ ತಂಡವನ್ನು ಸಂಪರ್ಕಿಸಿದ ಮಂಡ್ಯದ ರೈತರು, ನಮ್ಮಣ್ಣನ ಚಿತ್ರದ ಹಾಡಿನ ಶೂಟಿಂಗ್ ಭರ್ಜರಿ ಆಗಬೇಕು. ನಾವೆಲ್ಲಾ ರೈತರು ಒಟ್ಟಾಗಿ ಬರುತ್ತೇವೆ. ನಾವು ಎತ್ತಿನಗಾಡಿಯನ್ನೂ ತರುತ್ತೇವೆ. ಇದಕ್ಕೆ ಅವಕಾಶ ಮಾಡಿಕೊಡಿ ಎಂದಿದ್ದಾರೆ. ಇದಕ್ಕೆ ಒಪ್ಪಿರುವ ನಾರಾಯಣ್ ಕೆಲ ದಿನ ಶೂಟಿಂಗ್ ಮುಂದೂಡಿದ್ದಾರೆ. ಸುದೀಪ್ ಹಾಗೂ ಐಂದ್ರಿತಾ ರೇ ನಾಯಕ ನಾಯಕಿ ಆಗಿರುವ ಈ ಚಿತ್ರ ಸದ್ಯ ಮೈಸೂರಿನ ರೇಸ್ ಕೋರ್ಸ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಆಲ್ ದಿ ಬೆಸ್ಟ್ ಮಂಡ್ಯದ ಗಂಡು.