ಬಾಲಿವುಡ್ಡಿನಲ್ಲಿ ಮತ್ತೊಂದು ಚಿತ್ರ, ಸುದೀಪ್ ಜೊತೆಗೆ ಕಂಗನಾ ರಾಣಾವತ್!
MOKSHA
ಕನ್ನಡದಲ್ಲೇ ಇದ್ದುಕೊಂಡು ಬಾಲಿವುಡ್ಡಿನಲ್ಲೂ ಹೆಸರು ಗಳಿಸುವ ಪ್ರತಿಭೆ ಸುದೀಪ್ ಅವರದ್ದು. ಹಿಟ್ ಎನಿಸದಿದ್ದರೂ, ರಣ್ ಚಿತ್ರಕ್ಕಾಗಿ ಅಭಿನಯದ ಬಗ್ಗೆ ಪ್ರಶಂಸೆಯ ಮಹಾಪೂರಗಳನ್ನೇ ಕೇಳಿದ ಸುದೀಪ್ ಇದೇ ಜುಲೈ ಅಂತ್ಯದೊಳಗೆ ರಾಮ್ ಗೋಪಾಲ್ ವರ್ಮಾರ ರಕ್ತ ಚರಿತ ಚಿತ್ರದ ಶೂಟಿಂಗ್ ಮುಗಿಸಲಿದ್ದಾರೆ. ಮೂರು (ಹಿಂದಿ, ತಮಿಳು, ತೆಲುಗು) ಭಾಷೆಗಳಲ್ಲಿ ಹೊರ ಬರುತ್ತಿರುವ ರಕ್ತ ಚರಿತ ಚಿತ್ರದಲ್ಲಿ ಸುದೀಪ್ ಒಂದು ಗಮನಾರ್ಹ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ಡಿನ ವಿವೇಕ್ ಒಬೆರಾಯ್, ತಮಿಳಿನ ಸೂರ್ಯ ಕೂಡಾ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಇಂಥ ಸುದೀಪ್ ಇದೀಗ ಬಾಲಿವುಡ್ಡಿನಲ್ಲಿ ಇನ್ನೂ ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆಯುತ್ತಾ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ.
ಹೌದು. ಸುದೀಪ್‌ಗೆ ಮತ್ತೊಂದು ಅವಕಾಶ ದಕ್ಕಿದೆ. ಇದೇ ಬರುವ ಆಗಸ್ಟ್ ತಿಂಗಳಿಂದ ಚಿತ್ರೀಕರಣ ಆರಂಭವಾಗಲಿದೆಯಂತೆ. ಈ ಹಿಂದೆ ಸಲ್ಮಾನ್ ಖಾನ್, ಸ್ನೇಹಾ ಉಲ್ಲಾಳ್ ತಾರಾಗಣದ ಲಕ್ಕಿ ಎಂಬ ಚಿತ್ರ ನಿರ್ದೇಶಿಸಿದ್ದ ವಿನಯ್ ಸಪ್ರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರಂತೆ. ಚಿತ್ರದಲ್ಲಿ ಸುದೀಪ್ ಜೊತೆಗೆ ನಾಯಕಿಯಾಗಿ ಬಾಲಿವುಡ್ಡಿನ ಮತ್ತೊಂದು ಪ್ರತಿಭೆ ಕಂಗನಾ ರಾಣಾವತ್ ನಟಿಸಲಿದ್ದಾರೆ. ಈಗಾಗಲೇ ಸುದೀಪ್ ಏಳು ದಿನಗಳ ಕಾಲ್ ಶೀಟ್ ನೀಡಿದ್ದಾರಂತೆ. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ.
IFM
ಜೊತೆಗೆ ಸುದೀಪ್ ಸದ್ಯದಲ್ಲೇ ಮುಂಬೈಗೆ ತೆರಳಿ ತಮ್ಮ ಚಿತ್ರದ ಕುರಿತು ಸಲ್ಮಾನ್ ಖಾನ್ ಜೊತೆಗೆ ಮಾತುಕತೆಯನ್ನೂ ನಡೆಸಲಿದ್ದಾರಂತೆ. ಇದೇ ಸಂದರ್ಭ ನಿರ್ದೇಶಕ- ನಿರ್ಮಾಪಕ ವಿಧು ವಿನೋದ್ ಛೋಪ್ರಾ (ತ್ರಿ ಈಡಿಯಟ್ಸ್ ಖ್ಯಾತಿಯ) ಜೊತೆಗೂ ಮಾತುಕತೆ ನಡೆಸಲಿದ್ದಾರಂತೆ.
ಸದ್ಯ ಸುದೀಪ್ ಅವರ ಜಸ್ಟ್ ಮಾತ್ ಮಾತಲ್ಲಿ ಚಿತ್ರ ಸೋತರೂ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುವ ಸುದೀಪ್ ಸಾರಥ್ಯದ ಪ್ಯಾಟೆ ಹುಡುಗೀರ್ ಹಳ್ಳಿ ಲೈಫು ಕಾರ್ಯಕ್ರಮವಂತೂ ಜನಪ್ರಿಯತೆಯ ಉತ್ತುಂಗದಲ್ಲಿದೆ. ಈ ಕಾರ್ಯಕ್ರಮಕ್ಕಾಗಿ ಸುದೀಪ್ ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ಶಿವಮೊಗ್ಗದ ಹಳ್ಳಿಯೊಂದಕ್ಕೆ ಹೋಗಿದ್ದು ಬರುತ್ತಾರೆ. ಜೊತೆಗೆ ಎಸ್.ನಾರಾಯಣ್ ನಿರ್ದೇಶನದ ವೀರ ಪರಂಪರೆಯ ಶೂಟಿಂಗ್‌ನಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಕೈಯಲ್ಲೂ ಸಾಕಷ್ಟು ಚಿತ್ರಗಳಿವೆ. ಹಿಂದಿಯಲ್ಲೂ ನಿರ್ದೇಶಿಸುವ ಕನಸು ಕೈಗೂಡುವ ಲಕ್ಷಣಗಳಿವೆ. ಒಟ್ಟಾರೆ ಸುದೀಪ್ ಮಾತ್ರ ಸಿಕ್ಕಾಪಟ್ಟೆ ಬ್ಯುಸಿ.