ರಮ್ಯಾ ಹಾಗೂ ಲೂಸ್ ಮಾದ ಖ್ಯಾತಿಯ ಯೋಗೀಶ್‌ಗೆ ಯಾಕೋ ಜೋಡಿಯಾಗುವ ಅದೃಷ್ಟವಿಲ್ಲ ಅನ್ಸುತ್ತೆ. ಅಂದೊಮ್ಮೆ ಪುಂಡ ಚಿತ್ರಕ್ಕೆ ಲೂಸ್ ಜೊತೆ ರಮ್ಯಾ ನಾಯಕಿ ಎಂಬ ಮಾತು ಕೇಳಿ ಬಂದರೂ ಅದು ಠುಸ್ ಆಯಿತು. ನಂತರ ಸಿದ್ಧಲಿಂಗು ಚಿತ್ರದಲ್ಲಿ ರಮ್ಯಾ ಹಾಗೂ ಯೋಗಿ ಜೋಡಿಯಂತೆ ಎಂದರು. ಅದೂ ಠುಸ್ ಪಟಾಕಿಯಾಯಿತು. ಕೊನೆಗೂ ಲೂಸ್ ಮಾದ ಎಂಬ ಚಿತ್ರದಲ್ಲಿ ರಮ್ಯಾ ಹಾಗೂ ಯೋಗೀಶ್ ಜೊತೆಯಾಗಿ ನಟಿಸಲಿದ್ದಾರಂತೆ ಎಂಬ ಮಾತು ಕೇಳಿ ಬಂತು. ಈ ಬಾರಿ ಅದು ನಿಜವೂ ಆಗಿತ್ತು. ಆದರೆ ಅದ್ಯಾಕೋ ಅದಕ್ಕೂ ಈಗ ವಿಘ್ನ ಬಂದಿದೆ.
ಹೌದು. ಲೂಸ್ ಮಾದ ಖ್ಯಾತಿಯ ಯೋಗೀಶ್‌ಗೆ ರಮ್ಯಾ ಎಂದರೆ ಸಿಕ್ಕಾಪಟ್ಟೆ ಅಭಿಮಾನ. ತನ್ನ ರೂಂನಲ್ಲೆಲ್ಲಾ ಎಲ್ಲೆಲ್ಲೂ ರಮ್ಯಾಳ ಫೋಟೋನೇ ತುಂಬಿಕೊಂಡಿರುವ ಯೋಗೀಶ್‌ಗೆ ರಮ್ಯಾ ಜೊತೆಗೆ ನಟಟಿಸುವ ಗುರಿಯಿತ್ತು. ಅದು ನನಸೂ ಆಗುವ ಲಕ್ಷಣಗಳಿತ್ತು. ಅವರಿಬ್ಬರೂ ಲೂಸ್ ಮಾದ ಚಿತ್ರಕ್ಕಾಗಿ ಸಹಿ ಮಾಡಿದ್ದರು. ಆದರೆ ಇದೀಗ ಲೂಸ್ ಮಾದ ಕಥೆ ನಮ್ಮದು ಎಂದು ಸುಕುಮಾರ ಎಂಬ ಚಿತ್ರ ತಂಡ ಹೇಳಿಕೊಂಡಿದೆ. ಹೀಗಾಗಿ ಲೂಸ್ ಮಾದಕ್ಕೆ ಮತ್ತೆ ಅಡ್ಡಿ ಎದುರಾಗಿದೆ.
ಮಲಯಾಳಂ ನಿರ್ದೇಶಕ ರಾಜಸೇನನ್ ಸಾರಥ್ಯದಲ್ಲಿ ನಟಿ ಸಿಂಧು ಮೆನನ್ ಅವರ ಸಹೋದರ ಕಾರ್ತಿಕ್ ನಟನೆಯ ಸುಕುಮಾರ ಎಂಬ ಚಿತ್ರ ಎರಡು ವರ್ಷಗಳ ಹಿಂದೆ ಸೆಟ್ಟೇರಿತ್ತು. ಆದರೆ ಅದ್ಯಾಕೋ ಚಿತ್ರ ಬಿಡುಗಡೆ ಆಗಲಿಲ್ಲ. ನಿರ್ದೇಶಕ ಹಾಗೂ ನಿರ್ಮಾಪಕರ ನಡುವಿನ ಜಗಳವೇ ಚಿತ್ರ ಬಿಡುಗಡೆಯಾಗದಿರಲು ಕಾರಣ ಎನ್ನಲಾಗಿದೆ. ಆದರೆ, ಈಗ ಈ ಸುಕುಮಾರ ತಂಡದವರು ಇದು ನಮ್ಮ ಕಥೆ ಎಂದು ಲೂಸ್ ಮಾದ ವಿರುದ್ಧ ದೂರಿದ್ದಾರೆ.
ಲೂಸ್ ಮಾದ ಚಿತ್ರದ ನಿರ್ದೇಶಕರಾದ ಪ್ರಕಾಶ್ರಾಜ್ ಮಾಹು ಅವರು ಎರಡೂ ಚಿತ್ರಗಳ (ಲೂಸ್ ಮಾದ ಹಾಗೂ ಸುಕುಮಾರ) ಕಥೆ ಒಂದೇ ಆಗಿರುವುದರಿಂದ ಸುಕುಮಾರ ಚಿತ್ರದ ಕಥೆ ಬರೆದ ಕೆ. ನಂಜುಂಡ ಅವರನ್ನು ಭೇಟಿಯಾಗಿ ಸುಕುಮಾರ ಚಿತ್ರದ ಕಥೆಯ ಹಕ್ಕನ್ನು ನಮಗೆ ಕೊಡಿ ಎಂದು ಕೇಳಿದರಂತೆ. ಆದರೆ ಅವರು, ನಾನು ಈ ಚಿತ್ರದ ಕಥೆ ಬರೆಯಲು ಎರಡು ಲಕ್ಷ ಪಡೆದಿರುವುದರಿಂದ ನನಗೆ ಈ ಹಕ್ಕು ಕೊಡಲು ಹಕ್ಕಿಲ್ಲ. ನೀವು ಚಿತ್ರತಂಡವನ್ನು ಭೇಟಿಯಾಗಿ ಎಂದರಂತೆ. ಆದರೆ ನಟ ಕಾರ್ತಿಕ್ ಮಾತ್ರ ಚಿತ್ರದ ಹಕ್ಕನ್ನು ನೀಡಲು ತಯಾರಿಲ್ಲ. 'ನಮಗೆ ಪೂರ್ತಿ ಕಥೆ ಬೇಡ. ಕೇವಲ ಕೆಲವೇ ದೃಶ್ಯಗಳ ಹಕ್ಕು ಕೊಡಿ, ಅದಕ್ಕಾಗಿ 5 ಲಕ್ಷ ರೂಪಾಯಿ ಕೊಡಲೂ ಕೂಡಾ ಸಿದ್ಧ' ಎಂದು ಲೂಸ್ ಮಾದ ಚಿತ್ರದ ನಿರ್ದೇಶಕರು ಸುಕುಮಾರ ಚಿತ್ರತಂಡಕ್ಕೆ ಕೇಳಿಕೊಂಡರೂ ಇದೂ ಕೂಡಾ ಫಲ ನೀಡಿಲ್ಲ ಎನ್ನಲಾಗಿದೆ. ಹಾಗಾಗಿ ಲೂಸ್ ಮಾದ ಚಿತ್ರ ಬಹುತೇಕ ಮತ್ತೆ ಠುಸ್ ಪಟಾಕಿಯಾಗುವ ಲಕ್ಷಣಗಳಿವೆ.
ಅಂದ ಹಾಗೆ ಲೂಸ್ ಮಾದ ಚಿತ್ರದಲ್ಲಿ ರಮ್ಯಾ ನಟಿಯ ಪಾತ್ರದಲ್ಲಿದ್ದರೆ, ಯೋಗೀಶ್ ಒಬ್ಬ ಅಭಿಮಾನಿಯ ಪಾತ್ರದಲ್ಲಿ ಅಭಿನಯಿಸಲಿದ್ದರು. ಚಿತ್ರಕ್ಕೆ ಲೂಸ್ ಮಾದ ಎಂಬ ಹೆಸರಿಟ್ಟು, ರಮ್ಯಾ ಐ ಲವ್ ಯೂ ಎಂಬ ಟ್ಯಾಗ್ ಲೈನ್ ಕೂಡಾ ಇತ್ತು. ಆದರೆ, ರಮ್ಯಾ ಜೊತೆಗೆ ನಟಿಸುವ ಕನಸು ನನಸಾಯಿತೆಂದು ಯೋಗೀಶ್ ಅಂದುಕೊಳ್ಳುತ್ತಿರುವಾಗಲೇ ಮತ್ತೆ ಇದು ಮರೀಚಿಕೆಯಾಗಿದೆ.