ಬಹಳ ದಿನಗಳ ನಂತರ ಇದೀಗ ವಾಸು ಆಲೂರು ಮತ್ತೊಂದು ಸಾಮಾಜಿಕ ಸಮಸ್ಯೆಯ ಮೇಲೆ ಕಥೆಯನ್ನು ಸಿದ್ಧಪಡಿಸಿದ್ದಾರೆ. ಮೊನ್ನೆಯಷ್ಟೇ ಮುಹೂರ್ತ ಕಂಡ ಈ ಚಿತ್ರದ ಹೆಸರು 'ನಮ್ಮ ಕಲ್ಯಾಣಿ'.
ಶ್ರುತಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಒಬ್ಬ ನಿರ್ದಯಿ ತಾಯಿ, ಮಗು ಹಾಗೂ ಸಮಾಜ ಈ ಮೂರು ವಿಷಯಗಳನ್ನಿಟ್ಟುಕೊಂಡು ಸಾಮಾಜಿಕ ಸಮಸ್ಯೆಯೊಂದನ್ನು ಹೇಳಹೊರಟಿದ್ದಾರೆ ಆಲೂರು. ದಶಕಗಳಿಂದ ಹಲವಾರು ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುತ್ತಾ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ವಾಸು ಆಲೂರು, ಇತ್ತೀಚೆಗೆ ಮರೀಚಿಕೆ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.
ಚಿತ್ರದಲ್ಲಿ ಮುಖ್ಯವಾದ ಎರಡು ಪಾತ್ರಗಳಿವೆ. ಒಬ್ಬ ತಾಯಿ ಹಾಗೂ ಮಗು. ತಾಯಿ ಸ್ವಲ್ಪ ಒರಟು, ಮಗಳ ಪಾತ್ರ ಅದಕ್ಕೆ ವಿರುದ್ಧ. ಮೃದು ಸ್ವಭಾವದ ಗಂಭೀರವಾದ ಪಾತ್ರ. ಶ್ರುತಿಯವರನ್ನು ನಾವು ಮೊದಲು ಸಂಪರ್ಕಿಸಿ ಮಗಳ ಪಾತ್ರಕ್ಕೆ ಕೇಳಿದೆವು. ಆದರೆ ಸ್ಕ್ರಿಪ್ಟ್ ಓದಿದ ಅವರು ಗಯ್ಯಾಳಿ ತಾಯಿ ಪಾತ್ರವನ್ನೇ ಮಾಡುತ್ತೇನೆ ಎಂದರು. ಮೊದಲು ನಮ್ಮ ಮನದಲ್ಲಿ ಕೂಡ ತಾಯಿ ಪಾತ್ರಕ್ಕೆ ಅವರನ್ನೇ ಅಂದುಕೊಂಡಿದ್ದರೂ, ಇಂಥ ಪಾತ್ರ ಒಪ್ಪುತ್ತಾರೋ ಎಂಬ ಅನುಮಾನವಿತ್ತು. ಈಗ ಮಗಳ ಪಾತ್ರವನ್ನು ರಿಯಾ ಎಂಬ ನಟಿ ಮಾಡುತ್ತಿದ್ದಾರೆ.
ಚಿತ್ರದ ಕಥೆ ಕಾಲ್ಪನಿಕವಾದರೂ ಇದು ನಿಜ ಘಟನೆಯೊಂದರಿಂದ ಪ್ರೇರಣೆ ಪಡೆದುದಾಗಿದೆ. ಅಲ್ಲದೆ, ಚಿತ್ರದಲ್ಲಿ ಬರುವ ಘಟನೆಗಳು ದಿನನಿತ್ಯ ನಮ್ಮ ಸುತ್ತಮುತ್ತ ನಡೆಯುವಂಥದ್ದೇ ಕಥೆ ಇದು. ಬೆಂಗಳೂರಿನ ಸುತ್ತಮುತ್ತ ಅಂದರೆ ರಸ್ತೆಗಳು, ಸ್ಲಂ ಮೊದಲಾದ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಚಿತ್ರೀಕರಿಸಲಾಗುವುದು. ಅತಿ ಅವಶ್ಯವೆನಿಸುವ 3 ಹಾಡುಗಳನ್ನು ಅಳವಡಿಸಲಾಗಿದ್ದು ರಾಜು ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದು ವಾಸು ಹೇಳುತ್ತಾರೆ.
ನಾಯಕಿ ಶ್ರುತಿ ಪ್ರಕಾರ, ವಾಸು ಅವರು ಕಥೆ ಹೇಳಿದರು. ಇಷ್ಟವಾಯಿತು. ಅವರ ಪರಿಚಯ ಮೊದಲಿಂದ ಇತ್ತು. ಇದುವರೆಗೆ ಶೃತಿ ಮಾಡಿರದಂತಹ ಪಾತ್ರವಿದು. ಮುಗ್ದೆ, ಅಳುಮುಂಜಿ, ಮಕ್ಕಳಿಗಾಗಿ ಪರಿತಪಿಸುವ ತಾಯಿ ಇಂಥ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದೆ. ಇದು ಅದೆಲ್ಲಕ್ಕಿಂತ ವಿಭಿನ್ನ. ಕಠೋರ ತಾಯಿ, ಕೇವಲ 50 ರೂಪಾಯಿಗಳಿಗೆ ಮಗುವನ್ನು ಮಾರಿಕೊಳ್ಳುವಂಥ ತಾಯಿ. ಕೊನೆಯಲ್ಲಿ ಹಣಕ್ಕಿಂತ ತಾಯ್ತನವೇ ಮುಖ್ಯ ಎಂದು ಅರಿಯುವ ಪಾತ್ರ. ನಿರ್ದೇಶಕ ವಾಸು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ ಎಂದು ತನ್ನ ಪಾತ್ರದ ಬಗ್ಗೆ ಹೇಳಿದರು.
ದತ್ತರಾಜ್, ಸುಶೀಲ್ ಮೊಕಾಶಿ, ಬ್ಯಾಂಕ್ ಜನಾರ್ದನ್, ನಕ್ಷತ್ರ, ಜಿ.ಪಿ. ಕೃಷ್ಣ ಉಳಿದ ತಾರಾಗಣದಲ್ಲಿದ್ದಾರೆ. ಬೆಳ್ಳಿ ಚುಕ್ಕಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್ಎನ್‌ಬಿ ಮೂರ್ತಿ, ಗೀತಾ ಆಲೂರು, ರಮೇಶ್ ಕಲ್ಲೂರು ಹಾಗೂ ಎಚ್.ಆಂಜಿನಪ್ಪ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ವಾಸು ಅವರೇ ಬರೆದಿದ್ದಾರೆ. ಎಸ್ಎನ್‌ಬಿ ಮೂರ್ತಿ ಛಾಯಾಗ್ರಹಣವಿದೆ.