ನಿರ್ದೇಶಕ ಸುಧಾಕರ್ ಬನ್ನಂಜೆಯವರಿಗೆ ಒಂದು ಕೊರಗಿದೆ. ಕನ್ನಡ ಚಿತ್ರರಂಗಕ್ಕೆ ಸಿಕ್ಕಷ್ಟು ಮಾನ್ಯತೆ ರಾಜ್ಯದಲ್ಲಿ ತುಳು ಚಿತ್ರಕ್ಕೆ ಸಿಗುತ್ತಿಲ್ಲ ಎನ್ನುವುದು. ಇದೊಂದು ನೋವು ಹೊತ್ತು ಅವರು 'ದೇವೆರ್' ಚಿತ್ರದ ಮಾತು ಆರಂಭಿಸುತ್ತಾರೆ. 'ದೇವೆರ್' ಇವರ ಹೊಸ ತುಳು ಚಿತ್ರ. ಅವರದ್ದೇ ಆದ ಕಾದಂಬರಿ ಆಧಾರಿತ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಕರಾವಳಿ ತೀರದ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಸದ್ಯ ಡಬ್ಬಿಂಗ್ ಹಂತದಲ್ಲಿದ್ದು, ಇಡೀ ಚಿತ್ರತಂಡಕ್ಕೆ ತಮ್ಮ ಕೆಲಸದ ಬಗ್ಗೆ ಖುಷಿಯಿದೆ ಎನ್ನುತ್ತಾರೆ.
ಮುಂದೊಂದು ದಿನ ಈ ಚಿತ್ರಕ್ಕೆ ಬೃಹತ್ ಮನ್ನಣೆ ಸಿಗುತ್ತದೆ ಎಂಬ ಖುಷಿಯೇನೋ ಇದೆ. ಇನ್ನೊಂದು ಕಡೆ ಬೇಸರವಿದೆ. ಕಾರಣ ತುಳು ಸಿನಿಮಾ ಎಂಬ ಕೀಳರಿಮೆ ನಮ್ಮಲ್ಲಿಯೇ ಇರುವ ಕೆಲವರ ಮನದಲ್ಲಿ ಮನೆಮಾಡಿರುವುದು!
ಇದರಿಂದ ಕನ್ನಡ ಸಿನಿಮಾಗೆ ಸಿಗುವ ಎಲ್ಲ ಸೌಲಭ್ಯಗಳು, ಸ್ಥಾನಮಾನಗಳು ತುಳು ಚಿತ್ರಕ್ಕೂ ಸಿಗಬೇಕು. ಅದಕ್ಕೆ ಅದರದ್ದೇ ಆದ ಸಾಮರ್ಥ್ಯ, ಸತ್ವ, ಸ್ವಂತಿಕೆ ಇದೆ. ಆದರೆ, ಅದು ಇನ್ನಾದರೂ ಜಗಜ್ಜಾಹೀರುಗೊಳ್ಳಬೇಕಿದೆ. ಕನ್ನಡ ಚಿತ್ರಗಳಿಗೆ ಹೇಗೆ ರಾಜ್ಯ ಪ್ರಶಸ್ತಿ ಕೊಟ್ಟು ಗೌರವಿಸುತ್ತಾರೋ ಅದೇ ಮಾದರಿಯಲ್ಲಿ ತುಳು ಸಿನಿಮಾಗೂ ಮಾನ್ಯತೆ ಕೊಡಬೇಕು. ಪ್ರತ್ಯೇಕ ಪ್ರಶಸ್ತಿ ನೀಡಬೇಕು ಎಂದು ಸರಕಾರವನ್ನು ಕೋರಿದ್ದಾರೆ.
ವಿಶೇಷ ತಂತ್ರಜ್ಞಾನಗಳು ಇಲ್ಲಿಯೂ ಬರುತ್ತಿವೆ. ತಮ್ಮದು ಪ್ರಪ್ರಥಮ ತುಳು ಡಿಟಿಎಸ್ ಚಿತ್ರ! ದೇವೆರ್ ಚಿತ್ರದ ಇನ್ನೊಂದು ಹೆಗ್ಗಳಿಕೆ ಎಂದರೆ, ಈಗಾಗಲೇ ಸಾಕಷ್ಟು ತುಳು ಚಿತ್ರಗಳು ಬಂದಿದ್ದರೂ ಹೆಚ್ಚಿನವು ಕಡಿಮೆ ಬಜೆಟ್ಟಿನ ಮೊರೆ ಹೋಗಿದ್ದವು. ಆದರೆ, ದೇವೆರ್ ಹಾಗಿಲ್ಲ. ಇಲ್ಲಿ ಅದ್ದೂರಿತನದ ಜತೆ ಹೊಸ ತಂತ್ರಜ್ಞಾನದ ಘಮಘಮವೂ ಇದೆ ಎನ್ನುತ್ತಾರೆ.
ಈ ಚಿತ್ರದಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ಅದರಲ್ಲಿ ಐವತ್ತಕ್ಕೂ ಹೆಚ್ಚು ಹೊಸ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಸುಧೀರ್ ಕೋಟ್ಯಾನ್ ನಾಯಕನ ಪಾತ್ರ ಮಾಡಿದ್ದಾರೆ. ಹದಿನಾರು ದಿನ ಚಿತ್ರೀಕರಣ ಮಾಡಲಾಗಿದ್ದು, ಕಾಯಕವೇ ಕೈಲಾಸ ಎಂದು ನಂಬಿರುವ ನಾಯಕನ ಬದುಕಿನ ನಾಲ್ಕು ಪ್ರಮುಖ ಘಟ್ಟಗಳಲ್ಲಿ ಕಥೆ ನಡೆಯುತ್ತದೆ. ತಮ್ಮ ಲಕ್ಷಣ್ ಕಲಾನಿರ್ದೇಶನ ಮಾಡಿದ್ದು, ಒಳಚರಂಡಿ ವ್ಯವಸ್ಥೆಯಲ್ಲಿ ಹರಿಯುವ ಕೊಳಚೆ ನೀರಿನ ಸೆಟ್ ಹಾಕಲಾಗಿದೆ. ನಿರ್ಮಾಣದ ಜವಾಬ್ದಾರಿಯನ್ನು ವಿ.ಕೆ .ಪ್ರಕಾಶ್, ವಚನ್ ಶೆಟ್ಟಿ ಹಾಗೂ ಜನಶೀಲಾ ಶೆಟ್ಟಿ ಹೊತ್ತಿದ್ದಾರೆ. ಸಹ ನಿರ್ದೇಶನವನ್ನು ಉತ್ಸಾಹಿ ಯುವಕ ರಾಮದಾಸ್ ಮಾಡಿದ್ದಾರೆ. ತಾರಾಗಣದಲ್ಲಿ ಸಹನಾ, ಚೇತನ್ ರೈ, ಕಾರ್ಕಳ ಶೇಖರ್ ಭಂಡಾರಿ, ಕೆ.ವಿ.ಪ್ರಕಾಶ್ ಮೊದಲಾದವರಿದ್ದಾರೆ.