ಕೃಷ್ಣನ್ ಲವ್ ಸ್ಟೋರಿ ಗೆದ್ದಿದೆ. ವಿಭಿನ್ನ ಕಥಾ ಹಂದರ, ಮನಗೆಲ್ಲುವ ಹಾಡು, ಚುರುಕು ನಿರೂಪಣೆ ಇರುವ ಚಿತ್ರ ಇದಾಗಿದ್ದು, ಪ್ರೇಕ್ಷಕರಿಗೆ ವ್ವಾರೆವ್ಹಾ, ಇದ್ದರೆ ಇಂಥ ಚಿತ್ರ ಇರಬೇಕು ಅಂತ ಅನ್ನಿಸುವಂತೆ ಮಾಡಿದೆ.
ನಿರ್ದೇಶಕ ಶಶಾಂಕ್ ಈ ಚಿತ್ರವನ್ನು ಶೇ.75ರಷ್ಟು ರಿಯಲ್ ಸ್ಟೋರಿ ಆಧರಿಸಿ ಮಾಡಿದ್ದಾರೆ. ಉಳಿದ 25 ಪರ್ಸೆಂಟ್ ಚಿತ್ರದ ಅಗತ್ಯ ಹಾಗೂ ವೀಕ್ಷಕರ ಮನಸ್ಸನ್ನು ಆದರಿಸಿ ಮಸಾಲೆ ಸೇರಿಸಲಾಗಿದೆ. ಒಟ್ಟಾರೆ ಇದೊಂದು ನೈಜ ಘಟನೆ ಆಧಾರಿತ ಚಿತ್ರ.
ಪ್ರಚಾರದ ಭಾರವನ್ನೂ ಹೊತ್ತ ನಿರ್ದೇಶಕ ಶಶಾಂಕ್ ಎಲ್ಲದರಲ್ಲೂ ಯಶ ಕಂಡಿದ್ದಾರೆ. ಮಂಡ್ಯ ಮತ್ತು ಹಾಸನದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರ ಸಂಭ್ರಮ ನೋಡಿ ಶಶಾಂಕ್ ಪುಳಕಿತರಾಗಿದ್ದಾರೆ. ಇಂಥದ್ದೊಂದು ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ. ನಿಜಕ್ಕೂ ಅತ್ಯುತ್ತಮವಾಗಿ ಜನ ಸ್ಪಂದಿಸಿದ್ದಾರೆ ಎನ್ನುತ್ತಾರೆ ಶಶಾಂಕ್.
ಸ್ವಂತ ಪ್ರಚಾರಕ್ಕಾಗಿ ಸಿನಿಮಾಗೆ ಬರುವವರ ನಡುವೆ ಅಜಯ್ ವಿಭಿನ್ನವಾಗಿ ಕಾಣುತ್ತಾರೆ. ರಾಧಿಕಾ ಕೂಡಾ ವಿಭಿನ್ನವಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ಸಹಜತೆಗೆ ಹತ್ತಿರವಾಗಿ ಕಾಣುತ್ತಾರೆ. ಸೆಟ್‌ನಲ್ಲೇ ಕಿರಿಕ್ ಮಾಡಿಕೊಂಡು ಓಡಿ ಹೋಗುವವರ ನಟಿಯರ ಪಟ್ಟಿಗೆ ಸೇರದೇ, ಕಷ್ಟಪಟ್ಟು ಸಿನಿಮಾ ಗೆಲ್ಲಿಸುವವರೆಗೂ ಪ್ರೀತಿಯಿಂದ ಸಹಕರಿಸಿದ್ದಾರೆ.
ಇದರಲ್ಲಿ ಹೊಂಬೆಗೌಡರ ಪಾತ್ರ ಅತ್ಯುತ್ತಮವಾಗಿದೆ. ಹೊಂಬೇಗೌಡ್ರು ಅಂದರೆ ಪಾತ್ರಧಾರಿ ಅಲ್ಲ. ಬದಲಾಗಿ ಒಂದು ಬೈಕ್. ನಾಯಕನ ತಂದೆ, ತಾತಾ ಪ್ರೀತಿಯಿಂದ ಬಳಸಿದ ಬೈಕ್. ಇದರ ಜತೆ ಇವರಿಬ್ಬರ ಭಾರೀ ಸೆಂಟಿಮೆಂಟ್ ಇತ್ತು. ನಾಯಕನ ತಂದೆಗಂತೂ ಇದೇ ಅಚ್ಚುಮೆಚ್ಚು. ವಿಪರ್ಯಾಸವೆಂದರೆ ನಾಯಕ- ನಾಯಕಿ ಊರು ಬಿಟ್ಟು ಓಡಿ ಹೋಗುವುದು ಸಹ ಇದೇ ಹೊಂಬೆಗೌಡರ ಮೇಲೆ ಕುಳಿತು.
ಸೀರಿಯಸ್ ಕಥೆಯನ್ನು ತೆರೆಯ ಮೇಲೆ ತಂದಿರುವ ನಿರ್ದೇಶಕರು ಅಲ್ಲಲ್ಲಿ ಕಾಮಿಡಿ ಟಚ್ ನೀಡಿ ಜನರಿಗೆ ಬೋರ್ ಆಗದಂತೆ ನೋಡಿಕೊಂಡಿದ್ದಾರೆ. ಮನರಂಜನೆಗೇನು ಕೊರತೆ ಇಲ್ಲ. ನಾಯಕಿಯ ಅಣ್ಣನ ಪಾತ್ರದಲ್ಲಿ ಚಂದ್ರು ಅಭಿನಯಿಸಿದ್ದಾರೆ. ಹಾಸ್ಯ ಪಾತ್ರ. ಬೋಲ್ಡ್ ಎಂಡ್ ಎನರ್ಜಟಿಕ್ ಆಗಿ ಪಾತ್ರ ನಿಭಾಯಿಸಿದ್ದಾರೆ. ನಾಯಕ ಪಾಪದ ಹುಡುಗ. ನಾಯಕಿಯನ್ನು ಪ್ರೀತಿ ಮಾಡುವುದಾಗಿ ಹೇಳಲು ಹೋಗಿ ತುಂಬಾ ಸಾರಿ ಬೈಸಿಕೊಳ್ಳುವ ಮುಗ್ಧ. ಒಟ್ಟಾರೆ ರೀಲ್, ರಿಯಲ್ ಹಾಗೂ ಕಾಮೆಡಿ ಟಚ್ನ್ನು ಸರಿಯಾಗಿ ಬೆರೆಸಲಾಗಿದೆ. ಚಿತ್ರದ ಅಂತ್ಯ ದುರಂತವಾದರೂ, ನೋಡುಗರಿಗೆ ತೀರಾ ಬೇಸರವನ್ನು ಉಂಟು ಮಾಡುವುದಿಲ್ಲ.
ಒಟ್ಟಾರೆ ಚಿತ್ರವಂತೂ ಹಿಟ್ ಆಗಿದೆ. ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಜನಭರಿತ ಪ್ರದರ್ಶನ ಕಾಣುತ್ತಿದ್ದು, ಚಿತ್ರರಂಗಕ್ಕೆ ಬೇಕಾಗಿದ್ದ ಯಶಸ್ವೀ ಚಿತ್ರಗಳ ಪೈಕಿ ಇದೂ ಒಂದಾಗಿದೆ. ಪರಭಾಷಾ ಚಿತ್ರದ ಮುಂದೆ ಕನ್ನಡ ಚಿತ್ರ ನಿಲ್ಲುವುದಿಲ್ಲ ಎಂಬ ಮಾತನ್ನು ಈ ಮೂಲಕ ಶಶಾಂಕ್ ಸುಳ್ಳು ಮಾಡಿದ್ದಾರೆ. ಒಂದು ಒಳ್ಳೆ ಚಿತ್ರ ಮಾಡಿಕೊಟ್ಟರೆ ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬಂದೇ ಬರುತ್ತಾರೆ ಎಂಬುದನ್ನು ಈ ಚಿತ್ರದಿಂದ ಕಾಣಬಹುದು. ಕೃಷ್ಣನ ಲವ್ ಸ್ಟೋರಿಗೆ ಶುಭ ಕೋರೋಣ.