ತೂಗುದೀಪ್ ಶ್ರೀನಿವಾಸ್ ಚಿತ್ರದಲ್ಲಿ ಯಾವತ್ತೂ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರ ಪುತ್ರ ದರ್ಶನ್ ತೆರೆಯ ಮೇಲೆ ನಾಯಕರಾಗಿ ಮೆರೆಯುತ್ತಿದ್ದಾರೆ. ತೂಗುದೀಪ್ ತೆರೆಯ ಮೇಲೆ ಖಳನಾಯಕ, ತೆರೆಯ ಆಚೆ ನಾಯಕ ಎನಿಸಿಕೊಂಡಿದ್ದರು. ಆದರೆ ದರ್ಶನ್ ತೆರೆಯ ಮೇಲೆ ನಾಯಕ, ಆಚೆ ಖಳ ನಾಯಕ ಅನ್ನಿಸಿಕೊಂಡಿದ್ದರು.
ದರ್ಶನ್ ತುಂಬಾ ಒರಟ. ತಾನು ಹೇಳಿದ್ದೇ ಆಗಬೇಕು ಎಂದು ಹಠಮಾಡುವ ಅವಕಾಶವಾದಿ, ಅಹಂಕಾರಿ... ಎಂಬೆಲ್ಲಾ ಮಾತು ಕೇಳಿ ಬರುತ್ತಿದ್ದವು. ಆದರೆ, ಈಗ ಅದೆಲ್ಲಾ ಸುಳ್ಳು ಎನ್ನುವುದು ಸಾಬೀತಾಗಿದೆ. ಎಲ್ಲ ವಿಶ್ವರೂಪ ದರ್ಶನದ ಜತೆಗೆ ಮಾನವೀಯ ಮೌಲ್ಯಗಳ ದರ್ಶನ ಮಾಡಿಸುವ ದರ್ಶನ್ ಕೂಡ ಇದ್ದಾರೆ ಎಂದರೆ ನಿಮಗೆ ಆಶ್ಚರ್ಯವಾದೀತು.
ಹೌದು, ಇದೇ ದರ್ಶನ್ ಮೊನ್ನೆ ಮತ್ತೊಂದು ಪುಣ್ಯದ ಕೆಲಸ ಮಾಡಿದ್ದಾರೆ. ಸ್ವತಃ ತಮ್ಮ ಕೈಯಾರೆ ಹಿರಿಯ ಜೀವ, ಹಾಸ್ಯ ನಟ ಕೆ.ಎಂ. ರತ್ನಾಕರ್‌ಗೆ 25 ಸಾವಿರ ರೂ. ಕೊಡುವ ಮೂಲಕ ದಾನಿಯಾಗಿದ್ದಾರೆ. ಆದರೆ, ಈ ವಿಷಯ ಹೆಚ್ಚಿನವರಿಗೆ ಗೊತ್ತಿಲ್ಲ. ಮೈಸೂರಿನ ಸಮೀಪದ ಆಸ್ಪತ್ರೆಯೊಂದರಲ್ಲಿ ಶ್ವಾಸಕೋಶ ತೊಂದರೆಯಿಂದ ರತ್ನಾಕರ್ ಬಳಲುತ್ತಿದ್ದಾರೆ. ಭಕ್ತ ಕನಕದಾಸ, ಗುರು ಶಿಷ್ಯರು, ಅಣ್ಣಯ್ಯ, ಗಡಿಬಿಡಿ ಗಂಡ ಮುಂತಾದ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ರತ್ನಾಕರ್ ಕಡು ಬಡವರಲ್ಲದಿದ್ದರೂ ಸದ್ಯ ಅವರಿಗೆ ಆರ್ಥಿಕ ತೊಂದರೆ ಎದುರಾಗಿದೆ.
ಕೆಲ ವಾರಗಳಿಂದ ಆಸ್ಪತ್ರೆ ಸೇರಿದ್ದ ಅವರಿಗೆ, ದರ್ಶನ್ ಹಿಂದೆ ಮುಂದೆ ನೋಡದೆ ಆಸ್ಪತ್ರೆಗೆ 25 ಸಾವಿರ ರೂ. ಮುಟ್ಟಿಸಿದ್ದಾರೆ. ಅವರು ಕೊಟ್ಟ ಹಣದಿಂದ ರತ್ನಾಕರ್ ಆಸ್ಪತ್ರೆ ಬಿಲ್ ಸೆಟಲ್ ಮಾಡಿ, ನಿಶ್ಚಿಂತೆಯಿಂದ ಮನೆಗೆ ತೆರಳಿದ್ದಾರೆ. ಇದೇ ರೀತಿ ಪಿಆರ್ಒ ಸುಧೀಂದ್ರ ವೆಂಕಟೇಶ್ ಸಹ ಸಹಾಯ ಮಾಡಿದ್ದಾರೆ.