ರಾಜಕಾರಣಿ ಹಾಗೂ ನಿರ್ಮಾಪಕ ಸಂದೇಶ್ ನಾಗರಾಜ್ ಹೊಸ ಚಿತ್ರ ಮಾಡಲು ಹೊರಟಿದ್ದಾರೆ. ಚಿತ್ರದ ಹೆಸರು ಪ್ರಿನ್ಸ್.
ಹೊಸ ನಿರ್ದೇಶಕರು, ನಟರು, ನಟಿಯರು, ತಂತ್ರಜ್ಞರು ಬಿಜಿಯಾಗಿದ್ದ ಕಾರಣ ಎರಡು ವರ್ಷದಿಂದ ಚಿತ್ರರಂಗದತ್ತ ಹೆಚ್ಚಾಗಿ ಮುಖ ಮಾಡದ ಸಂದೇಶ್ ಈಗ ಪ್ರಿನ್ಸ್ ಹೊತ್ತು ಬಂದಿದ್ದಾರೆ. ಇದೀಗ ಇವರ ಪ್ರಿನ್ಸ್ ಆಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಯ್ಕೆಯಾಗಿದ್ದಾರೆ. ಇವರಿಗೆ ನಾಯಕಿಯರಾಗಿ ನಿಖಿತಾ ಮತ್ತು ಜೆನಿಫರ್ ಎಂಬ ಗ್ಲಾಮರ್ ಬೊಂಬೆಗಳು ಸಿಕ್ಕಿದ್ದಾರೆ.
ವಿಶೇಷ ಅಂದರೆ ಇದೊಂದು ಸ್ವಮೇಕ್ ಚಿತ್ರ. ಮೈಸೂರಿನ ಸುತ್ತಮುತ್ತ ಬಹುತೇಕ ಚಿತ್ರೀಕರಣ ನಡೆಯಲಿದೆ. ಎರಡು ಹಾಡುಗಳನ್ನು ಕರ್ನಾಟಕದಲ್ಲಿ, ಮೂರು ಹಾಡುಗಳನ್ನು ವಿದೇಶಗಳಲ್ಲಿ ಚಿತ್ರೀಕರಿಸಲಾಗುವುದು. ಚಿತ್ರ ಅದ್ದೂರಿಯಾಗಿ ಮೂಡಿಬರಲಿದೆ. ಬಜೆಟ್ ಮಿತಿ ಹಾಕಿಕೊಂಡಿಲ್ಲ. ಲಾಭ-ನಷ್ಟದ ಪ್ರಶ್ನೆಯೂ ಇಲ್ಲ ಎನ್ನುತ್ತಾರೆ ಸಂದೇಶ್.
ತ್ರಿಕೋನ ಪ್ರೇಮ ಕಥೆಯಿರುವ ಚಿತ್ರದ ಕಥೆ-ಚಿತ್ರಕಥೆ ಎರಡೂ ಓಂ ಪ್ರಕಾಶ್ ರಾವ್ ಅವರದೇ. ಅವಿನಾಶ್, ಶೋಭರಾಜ್, ರಂಗಾಯಣ ರಘು, ಸಿಹಿಕಹಿ ಚಂದ್ರು, ಶೇಖರ್ ಕೋಟ್ಯಾನ್ ಪ್ರಮುಖ ತಾರಾಗಣದಲ್ಲಿದ್ದಾರೆ. ಸಂಗೀತ ನಿರ್ದೇಶನವನ್ನು ವಿ.ಹರಿಕೃಷ್ಣ ಹಾಗೂ ಸಂಭಾಷಣೆಯನ್ನು ಎಂ.ಎಸ್.ರಮೇಶ್ ವಹಿಸಿಕೊಂಡಿದ್ದಾರೆ. ಸಂಕಲನ ಲಕ್ಷ್ಮಣ್ ರೆಡ್ಡಿ ಅವರದ್ದು. ಛಾಯಾಗ್ರಹಣ ವೀನಸ್ ಮೂರ್ತಿ. ಪಳನಿರಾಜ್, ರವಿವರ್ಮ ಅವರು ಸಾಹಸ ಸಂಯೋಜಿಸಿದ್ದಾರೆ.