ಸುಪ್ರಭಾತ, ಅಮೃತವರ್ಷಿಣಿ, ಲಾಲಿ ಮೊದಲಾದವು ಸೇರಿದಂತೆ 25ಕ್ಕೂ ಹೆಚ್ಚು ಹಿಟ್ ಚಿತ್ರ ನೀಡಿರುವ ದಿನೇಶ್ ಬಾಬು ಅವರ ಅದೃಷ್ಟವೇ ಚೆನ್ನಾಗಿಲ್ಲ. ಇವರ ಯಾವ ಚಿತ್ರವೂ ಇದುವರೆಗೂ ಕರ್ನಾಟಕ ಗಡಿ ದಾಟಿ ಆಚೆ ಹೋಗಿಲ್ಲ.
ಒಟ್ಟಾರೆ ಇವರ ಜನಪ್ರಿಯತೆ ಊರು ಬಿಟ್ಟು ಆಚೆ ಹೋಗದ ಊರಗೌಡರ ಜನಪ್ರಿಯತೆಯಂತೆ ಆಗಿದೆ. ಉತ್ತಮ ಚಿತ್ರವನ್ನೇನೋ ಮಾಡಿದ್ದಾರೆ. ಆದರೆ ಅದು ಕನ್ನಡೇತರರನ್ನು ತಟ್ಟಿಯೇ ಇಲ್ಲ. ಇವರ ಯಾವ ಚಿತ್ರವೂ ಬೇರೆ ಯಾವ ಭಾಷೆಗೂ ರಿಮೇಕ್ ಆಗಿಲ್ಲ. ಇದೀಗ ಇತಿಹಾಸವನ್ನು ಬದಲಿಸಲು ಅವರು ಮುಂದಾಗಿದ್ದಾರೆ. ಅದಕ್ಕೆ ಸಹಕರಿಸುತ್ತಿರುವುದು ಅವರ ಎರಡನೇ ಮದುವೆ.
ಇದೇನು ಚಿತ್ರ ಮಾಡಿ ತಲುಪಲು ಆಗುವುದಿಲ್ಲ, ಅಂತ ಎರಡನೇ ಮದುವೆ ಮಾಡಿಕೊಂಡು ಬಿಟ್ಟರಾ? ಬೇರೆ ರಾಜ್ಯದ ಹುಡುಗಿಯನ್ನು ವರಿಸಿ ಗಡಿ ರೇಖೆ ಮೀರಿದರಾ? ಅಂತ ಅಲವತ್ತುಕೊಳ್ಳುವ ಅಗತ್ಯ ಇಲ್ಲ.
ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಪಕ್ಕಾ ಫ್ಯಾಮಿಲಿ ಚಿತ್ರ, ಅನಂತ್‌ನಾಗ್, ಸುಹಾಸಿನಿ, ತಾರಾ ಮುಂತಾದವರಿರುವ 'ಎರಡನೇ ಮದುವೆ' ತೆಲುಗಿಗೆ ರಿಮೇಕ್ ಆಗುತ್ತಿದೆ! ಚಿತ್ರದ ಹಕ್ಕನ್ನು ತೆಲುಗಿನ 'ಜಂಟಲ್‌ಮನ್' ದಾಸರಿ ನಾರಾಯಣ ರಾವ್ ಬಳಗದವರು ಪಡೆದಿದ್ದಾರೆ. ವಿಶೇಷ ಎಂದರೆ, ಅಲ್ಲಿಯೂ ನಿರ್ದೇಶನದ ಜವಾಬ್ದಾರಿ ಬಾಬು ಅವರದು.
ಅಂತೂ ಹೀಗೆ ಬಾಬು ಗಡಿ ದಾಟುವ ಯತ್ನದಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಕನ್ನಡದಲ್ಲಿ ಈಗಾಗಲೇ ಚಿತ್ರೀಕರಣ ಮುಗಿಸಿರುವ ಎರಡನೇ ಮದುವೆ ಬರುವ ವಾರ ಬಿಡುಗಡೆ ಆಗುತ್ತಿದೆ. ಅದಕ್ಕೊಂದು ಆಲ್ ದಿ ಬೆಸ್ಟ್ ಅನ್ನೋಣ.