'ಯಾರ್ರೀ ಹೇಳಿದ್ದು ? ನಾನು ಇಲ್ಲಿಯವರೆಗೆ ಯಾರೊಬ್ಬ ಪತ್ರಕರ್ತನಿಗೂ ಬೈದಿಲ್ಲ. ಬೈದೂ ಗೊತ್ತಿಲ್ಲ!'
ಗದರಿಸುವ ದನಿಯಲ್ಲೇ ಮಾತನಾಡಿದವರು 'ನಾನು ನನ್ನ ಕನಸು' ರೂವಾರಿ ಪ್ರಕಾಶ್ ರೈ ಅಥವಾ ರಾಜ್. ಇದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಒಂದು ಪತ್ರಿಕೆಯಲ್ಲಿ 'ನಾನು ನನ್ನ ಕನಸು' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ನಿರ್ಮಾಪಕರು ಹಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಕಟಿಸಲಾಗಿತ್ತು. ಅದರಿಂದ ಕೋಪಗೊಂಡ ಪ್ರಕಾಶ್ ರೈ ಹಾಗೂ ಅವರ ಖಾಸಾ ದೋಸ್ತ ಬಿ.ಸುರೇಶ್, ಆ ಪತ್ರಕರ್ತನಿಗೆ ಫೋನ್ ಮಾಡಿ ರೇಗಿದರಂತೆ. ಇದನ್ನು ಆ ಪತ್ರಕರ್ತರು ತಮ್ಮ ಮಾಧ್ಯಮ ಮಿತ್ರರೊಂದಿಗೆ ಹೇಳಿಕೊಂಡಿದ್ದರು.
ಈ ಮೂಲಕ ಗೊತ್ತಿಲ್ಲದೇ ನಡೆದ ಒಂದು ವಿವಾದಕ್ಕೆ, ಪತ್ರಕರ್ತರ ನಡುವೆ ನಡೆದ ಮಾತುಕತೆಗೆ ರೈ ಈ ಮಾತನ್ನು ಪ್ರಸ್ತಾಪಿಸಿದ್ದಾರೆ. ಅಲ್ಲಲ್ಲ ರೈ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಆ ವ್ಯಕ್ತಿಗೆ ಫೋನ್ ಮಾಡಿಸುವ ಅಗತ್ಯ ಆದರೂ ಏನಿತ್ತು ಅನ್ನುವುದಕ್ಕೆ ಅವರ ಬಳಿ ಉತ್ತರ ಇಲ್ಲ. ಹೋಗಲಿ, ಗೆದ್ದ ಚಿತ್ರದ ಬಗ್ಗೆ ಇನ್ನೇನು ಹೇಳೋಣ ಅಂತ ಸುಮ್ಮನಾಗಬಹುದು.
ಆದರೆ ಪತ್ರಕರ್ತರ ಮೇಲೆ ಸೋತ ಚಿತ್ರದ ನಿರ್ಮಾಪಕರು ಹರಿಹಾಯುವ ಸಂದರ್ಭ ಸಾಕಷ್ಟು ಎದುರಾಗುತ್ತಿದೆ. ಮೊನ್ನೆ ಮೊನ್ನೆ ಪೃಥ್ವಿ ಚಿತ್ರದ ನಿರ್ಮಾಪಕರು ಪತ್ರಿಕೆಯೊಂದರ ವರದಿಗಾರನಿಗೆ ಧಮಕಿ ಹಾಕಿದ್ದರು. ನಂತರ ಕ್ಷಮೆ ಕೋರಿದರು. ಪೃಥ್ವಿ ಸ್ಥಿತಿ ಹೇಗಿದೆ ಎನ್ನುವುದು ಇಂದು ಎಲ್ಲರಿಗೂ ಗೊತ್ತು.
ವಿಪರ್ಯಾಸ ಎಂದರೆ ಬಹುತೇಕ ಪತ್ರಿಕೆಗಳು ನಾನು ನನ್ನ ಕನಸು ಚಿತ್ರ ಚೆನ್ನಾಗಿದೆ ಎಂದು ಬರೆದಿವೆ. ಆದರೆ ಅವರ್ಯಾರಿಗೂ ರೈ ಫೋನ್ ಮಾಡಿ ಅಥವಾ ಸುರೇಶ್‌ರಿಂದ ಮಾಡಿಸಿ ಥ್ಯಾಂಕ್ಸ್ ಹೇಳಿಲ್ಲ ಅಥವಾ ಹೇಳಿಸಿಲ್ಲ. ಇದಕ್ಕೇ ಇರಬೇಕು ಇದರ ಹೆಸರು ಬಣ್ಣದ ಲೋಕ.