ಗೆದ್ದಿತು ಪ್ರಕಾಶ್ ರೈ ಕನಸು

ಪ್ರಕಾಶ್ ರೈ ನಿರ್ದೇಶನದ ನಾನೂ ನನ್ನ ಕನಸು ಚಿತ್ರ ಐವತ್ತು ದಿನ ಪೂರೈಸಿದೆ.ಪಿವಿಆರ್, ಐನಾಕ್ಸ್, ಇನ್ನೊವೆಟಿವ್ ಮೊದಲಾದ ಕ್ಲಾಸ್ ಚಿತ್ರಮಂದಿರಗಳಲ್ಲಿ ಇಂದಿಗೂ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಪ್ರಕಾಶ್ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಅಂದುಕೊಂಡದ್ದು- ಚಿತ್ರ ಯರ್ರಾಬಿರ್ರಿ ಹಿಟ್ ಆಗಬೇಕು. ಜನ ಎದ್ದೂ ಬಿದ್ದು ನೋಡಬೇಕು. ಆದರೆ, ಅದು ಕೇವಲ ಮನೆ ಮಂದಿಗೆ ಮಾತ್ರ ಇಷ್ಟವಾಗಿದೆ.ಗಾಂಧಿ ಕ್ಲಾಸ್ ಮಂದಿಗೆ ಅದ್ಯಾಕೋ ಇಷ್ಟವಾಗಿಲ್ಲ. ಕತೆಯಲ್ಲಿ ಮೂರನೇ ಸ್ತರದ ಪ್ರೇಕ್ಷಕರನ್ನು ಸೆಳೆಯುವ ಅಂಶಗಳಿಲ್ಲ ಎಂದರೆ ರೈ ಬೇಸರ ಮಾಡಿಕೊಳ್ಳಬಾರದು! ಆದರೂ ಚಿತ್ರ ಗೆದ್ದಿದೆ. ಹಾಲಲ್ಲಾದರೂ, ನೀರಲ್ಲಾದರೂ ಗೆಲುವು ಗೆಲುವೇ. ಇತ್ತೀಚೆಗೆ ಸಾಲು ಸಾಲು ಚಿತ್ರಗಳು ಸೋಲು ಅನುಭವಿಸುತ್ತಿರುವಾಗ ರೈ ಕನಸಿಗೆ ಈ ಮಟ್ಟದ ಪ್ರತಿಕ್ರಿಯೆ ದೊರೆತಿರುವುದು ನಿಜಕ್ಕೂ ಖುಷಿಯ ಸಂಗತಿ. ಇನ್ನೂ ಹೆಚ್ಚು ಜನರನ್ನು ತಲುಪುವಂತೆ ಮಾಡಬಹುದಿತ್ತು ಎನ್ನುವುದು ಇನ್ನೊಂದು ಭಾಗದ ವಿಮರ್ಶೆ.ಅಂದ ಹಾಗೆ ನಾನು ನನ್ನ ಕನಸು ಚಿತ್ರ ರಾಜ್ಯದ ಏಳು ಕೇಂದ್ರಗಳಲ್ಲಿ ಐವತ್ತು ದಿನ ಪೂರೈಸಿದೆ. ಹಂಸಲೇಖ ಸಂಗೀತ ಚಿತ್ರದ ಪ್ರಮುಖ ಹೈಲೈಟ್ ಅನ್ನುವಲ್ಲಿ ಸಂಶಯವೇ ಇಲ್ಲ. ಅಭಿನಯಕ್ಕೆ ಒತ್ತು ನೀಡಿರುವುದು ಚಿತ್ರದ ಗೆಲುವಿಗೆ ಇನ್ನೊಂದು ಕಾರಣ ಎನ್ನುವುದನ್ನು ರೈ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಕನ್ನಡದಲ್ಲಿ ಸಾಲು ಸಾಲು ತೋಪೆದ್ದ ಚಿತ್ರದ ನಡುವೆ ನಿಂತ ಚಿತ್ರಗಳು ಒಂದೋ ಎರಡೋ. ಅದರಲ್ಲಿ ರೈ ಚಿತ್ರವೂ ಇರುವುದು ಸಂತಸದ ಸಂಗತಿ. ತಮಿಳಲ್ಲಿ ಮೆರೆದ ಕನ್ನಡದವರಾಗಿ ಕನ್ನಡಕ್ಕೆ ಇವರು ನೀಡಿದ ಕೊಡುಗೆ ಅನನ್ಯ.