ಸಿಂಹಾದ್ರಿಯ ಸಿಂಹ, ಆ ಸ್ವಾತಿಮುತ್ತು, ಆ ಮೈ ಆಟೊಗ್ರಾಫ್ ಸೇರಿದಂತೆ ಕನ್ನಡದಲ್ಲಿ ಹತ್ತಾರು ಚಿತ್ರ ಮಾಡಿರುವ ನಟಿ ಮೀನಾ ನಿಮಗೆಲ್ಲಾ ಗೊತ್ತೇ ಇರಬೇಕು. ಹಿಂದೆ ಪುಟ್ನಂಜನ ಜತೆ ಕುಣಿದಾಡಿ ಹೆಸರು ಮಾಡಿದ್ದ ಈ ನಟಿಯ ಮೈಮಾಟ ಯಾರಿಗೆ ಮರೆಯಲು ಸಾಧ್ಯ?
ಇದೇ ಮೀನಾ ಸದ್ಯ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಬಿಜಿ. ಹೀಗಿದ್ದೂ ಅವರಿಗೆ ಕನ್ನಡ ಭಾಷೆ ಹಾಗೂ ಚಿತ್ರಗಳ ಬಗ್ಗೆ ಬೆಟ್ಟದಷ್ಟು ಅಭಿಮಾನ. ಕಾರಣ ಸಿಂಪಲ್. ಹಿಂದೆ ಇದೇ ಕನ್ನಡ ಚಿತ್ರರಂಗ ಅವರಿಗೆ ಹಂತ ಹಂತವಾಗಿ ಬ್ರೇಕ್ ಕೊಟ್ಟಿತ್ತು. ನಂತರ ಅಕ್ಕ ಪಕ್ಕದ ಭಾಷೆಯ ಚಿತ್ರರಂಗ ಅವರಿಗೆ ಬುಲಾವ್ ನೀಡಿತ್ತು. ಅಲ್ಲಿ ಗೆಲುವು ಕಾದಿತ್ತು.
ಇದೀಗ ಅವರ ವಿಷಯ ಇಲ್ಲಿ ಪ್ರಸ್ತಾಪವಾಗಲು ಅವರ ಹೆಂಡ್ತೀರ್ ದರ್ಬಾರ್ ಕಾರಣ. ಅಲ್ಲದೇ ಇವರು ಇತ್ತೀಚೆಗೆ ವಿವಾಹ ಮಾಡಿಕೊಂಡು ಬೆಂಗಳೂರು ಸಮೀಪದ ಬನ್ನೇರುಘಟ್ಟಕ್ಕೆ ಬಂದು ನೆಲೆಸಿದ್ದಾರೆ. ಪತಿ ವಿದ್ಯಾಸಾಗರ್ ಜತೆ ಸುಖ ಸಂಸಾರ. ಜತೆಗೆ ಚಿತ್ರ ಬದುಕು. ಕನ್ನಡದ ಮೇಲೆ ಅದೇಕೋ ಕೊಂಚ ಹೆಚ್ಚು ಪ್ರೀತಿ. ಹಾಗಾಗಿ ಮೊದಲ ಆದ್ಯತೆ ಕನ್ನಡ ಚಿತ್ರಗಳಿಗೆ ಎಂದು ನಗುವಿನ ಓಕುಳಿ ಆಡುತ್ತಾರೆ ಮೀನಾ.
ಹಾಗಂತ ಬೇರೆ ಭಾಷೆಯ ಚಿತ್ರಗಳು ಬೇಡ ಎಂದಲ್ಲ. ಅದೂ ಬೇಕು. ಇದೂ ಇರಬೇಕು ಎನ್ನುವುದು ಅವರ ಉದ್ದೇಶ ಹಾಗೂ ಆಶಯ. ಇದು ನಿಜವಾಗಬೇಕಾದರೆ ಅವಕಾಶ ಬೇಕು. ಕನ್ನಡ ಚಿತ್ರಗಳಲ್ಲಿ ಮುಂದುವರಿಯುವ ಕನಸು ನನಸಾಗುತ್ತಾ ಎನ್ನುವುದು ಹೆಂಡ್ತೀರ್ ದರ್ಬಾರ್ ಚಿತ್ರದ ಫಲಿತಾಂಶದ ಮೇಲೆ ನಿಂತಿದೆ ಎನ್ನಬಹುದು. ಚಿತ್ರ ನಿನ್ನೆ ಬಿಡುಗಡೆಯಾಗಿದ್ದು, ಜನ ಪರವಾಗಿಲ್ಲ ಅನ್ನುತ್ತಿದ್ದಾರೆ.