ಹ್ಯಾಟ್ರಿಕ್ ಹೀರೊ ಅಭಿನಯಿಸಿರುವ ಹಿಂದೂ ಮುಸ್ಲಿಂ ಕೋಮುವಾದದ ಸಂಘರ್ಷದ ಹಿನ್ನೆಲೆಯುಳ್ಳ ಚಿತ್ರ ತಮಸ್ಸು. ಇತ್ತೀಚೆಗಷ್ಟೆ ತೆರೆ ಕಂಡಿರುವ ಹಾಗೂ ಸಾಕಷ್ಟು ಉತ್ತಮ ವಿಮರ್ಶೆಗಳೂ ಕೇಳಿ ಬರುತ್ತಿರುವ ತಮಸ್ಸು ಚಿತ್ರದಲ್ಲಿ ವಿಷ್ಣುವರ್ಧನ್ ನಟಿಸಬೇಕಿತ್ತೇ?
ಹೌದು ಎನ್ನುತ್ತಿದ್ದಾರೆ ಸ್ವತಃ ಅಗ್ನಿ ಶ್ರೀಧರ್. ಅವರು ಹೇಳುವ ಪ್ರಕಾರ ಆಗೊಮ್ಮೆ ವಿಷ್ಣು ಅವರನ್ನು ಅವರೇ ಸಂಪರ್ಕಿಸಿದ್ದರಂತೆ. ಕಥೆ ಬಗ್ಗೆ ಮಾತುಕತೆಯೂ ಆಗಿತ್ತಂತೆ. ವಿಷ್ಣು ಕಥೆ ಕೇಳಿ ಇಷ್ಟಪಟ್ಟರಂತೆ. ಆದರೆ, ನನಗೂ ಮುಸ್ಲಿಂ ಬಾಂಧವರಿಗೂ ಮೊದಲಿಂದ ಅದೇನೋ ಅವಿನಾಭಾವ ಸಂಬಂಧ ಇದೆ. ಹಾಗಾಗಿ ಈ ಪಾತ್ರವನ್ನು ನಾನು ಮಾಡುವುದು ಅಷ್ಟು ಸೂಕ್ತವಲ್ಲ ಎನ್ನಿಸುತ್ತಿದೆ. ನನ್ನ ಬದಲು ಈ ಪಾತ್ರವನ್ನು ನಾಸಿರುದ್ದೀನ್ ಶಾ ಅಥವಾ ನಾಸರ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ನಯವಾಗಿ ತಿರಸ್ಕರಿಸಿದರಂತೆ ವಿಷ್ಣು!
ನಂತರ ಆ ಪಾತ್ರವನ್ನು ಶಿವರಾಜ್ ಕುಮಾರ್ ಮಾಡಲು ಒಪ್ಪಿದರು. ಆದರೆ, ಅಪ್ರತಿಮ ಕಲಾವಿದ ವಿಷ್ಣು ಅದನ್ನು ಒಪ್ಪಲಿಲ್ಲ ಎಂಬ ಬಗ್ಗೆ ಖಂಡಿತ ಬೇಸರವಿಲ್ಲ. ಏಕೆಂದರೆ, ಶಿವಣ್ಣ ಆ ಪಾತ್ರಕ್ಕೆ ವಿಷ್ಣು ಮಟ್ಟಕ್ಕೇ ಜೀವ ತುಂಬಿದರು ಎನ್ನುತ್ತಾರೆ ಶ್ರೀಧರ್.
ಈ ಮಾತಿನ ಮೂಲಕ ಶಿವಣ್ಣನ ಪರಿಪಕ್ವ ಅಭಿನಯಕ್ಕೆ ಕ್ರೆಡಿಟ್ ಕೊಡುವ ಜತೆಗೆ ವಿಷ್ಣು ಅವರನ್ನೂ ಉನ್ನತ ಸ್ಥಾನದಲ್ಲಿ ಕೂರಿಸುವ ಕಾರ್ಯ ಶ್ರೀಧರ್ ಮಾಡಿದ್ದಾರೆ.