ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಮೊನ್ನೆ ಮೊನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಇಲ್ಲೇ ಬೆಂಗಲೂರಲ್ಲೇ ಇದ್ದುಕೊಂಡು ಹೆಂಡತಿ ಹಾಗೂ ಪುಟ್ಟ ಮಗು ಚಾರಿತ್ರ್ಯಜೊತೆಗೆ ಗಡದ್ದಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಗಣೇಶ್‌ಗೆ ಹೆಂಡತಿಯಿಂದರೆ ಸಿಕ್ಕಾಪಟ್ಟೆ ಹೆಮ್ಮೆ. ಹೆಂಡತಿಯ ನಿರ್ಮಾಣದ ಸಿನಿಮಾದಲ್ಲಿ ನಟಿಸೋದೆಂದರೆ ಇ್ನನೂ ಖುಷಿಯಂತೆ. ಈಗಾಗಲೇ ಮಳೆಯಲಿ ಜೊತೆಯಲಿ ಎಂಬ ಹೆಂಡತಿಯ ನಿರ್ಮಾಣದ ಚಿತ್ರದಲ್ಲಿ ನಟಿಸಿ ಥ್ರಿಲ್ಲಾಗಿರುವ ಗಣೇಶ್ ಸದ್ಯ ಹೆಂಡತಿಯ ಮತ್ತೊಂದು ಚಿತ್ರ ಕೂಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಕೂಲ್ ಆಗಿಯೇ ಸಕತ್ ಹಾಟ್ ಕೂಡಾ ಆಗಿದ್ದಾರೆ.
ಹೆಂಡತಿ ಬಗ್ಗೆ ಮಾತನಾಡುವ ಗಣೇಶ್, ನನ್ನ ಹೆಂಡತಿ ಶಿಲ್ಪಾಗೆ ಪ್ರತಿಭೆ ಇದೆ. ಆಕೆ ಈಗಷ್ಟೇ ಚಿತ್ರ ನಿರ್ಮಾಣದಲ್ಲಿ ಕೈಹಾಕಿದ್ದಾಳೆ. ಈಗಷ್ಟೇ ಆ ವಲಯದಲ್ಲಿ ಕೊಂಚ ಕಲಿತುಕೊಳ್ಳುತ್ತಿದ್ದಾಳೆ. ಆಕೆಗೆ ನಿರ್ದೇಶನದಲ್ಲೂ ಆಸಕ್ತಿಯಿದೆ. ಆಕೆಗೆ ನಿರ್ದೇಶನ ಮಾಡುವ ಪ್ರತಿಭೆಯೂ ಇದೆ. ಆದರೆ ಈಗಲೇ ಅದಕ್ಕೆಲ್ಲ ಕೈ ಹಾಕೋದು ಬೇಡ ಅಂತ ಸುಮ್ಮನೆ ಇದ್ದೀವಿ. ಕೊಂಚ ಕಾಲ ಕಳೆಯಲಿ. ಆಕೆಗೆ ಕ್ಯಾಮರಾ ಹಿಂದಿನ ಕೆಲಸವೆಲ್ಲ ಕರಗತವಾಗಬೇಕು. ಆಕೆಗೆ ಅದು ಸಾಧ್ಯವಿದೆ ಕೂಡಾ. ನನ್ನ ಹೆಂಡತಿ ನಿರ್ದೇಶಿಸುವ ಚಿತ್ರವೊಂದರಲ್ಲಿ ನಾನು ನಟಿಸಿದರೆ, ಆಗ ನನ್ನಷ್ಟು ಸುಖೀ ಗಂಡನೇ ಮತ್ತೊಬ್ಬನಿಲ್ಲ ಕಣ್ರೀ ಅಂತ ಗಣೇಶ್ ಸಂಭ್ರಮದಿಂದ ಹೇಳುತ್ತಾರೆ.
ಪಕ್ಕದ್ಮನೆ ಹುಡುಗನ ಇಮೇಜ್ ಹೊಂದಿರುವ ಗಣೇಶ್‌ಗೆ ತನ್ನ ಇಮೇಜ್ ಬಗ್ಗೆ ಸಂತೃಪ್ತಿಯಿದೆ. ನಾನೊಬ್ಬ ಸಾಮಾನ್ಯ ಮನುಷ್ಯನಾಗಿಯೇ ಹುಟ್ಟಿ ಬೆಳೆದವನು. ಕಷ್ಟ ಎಂಬುದು ನನಗೆ ಏನು ಎಂದು ಗೊತ್ತು. ಹಂತಹಂತವಾಗಿ ನಾನು ಬೆಳೆದುದನ್ನು ಚಿತ್ರರಂಗವೇ ನೋಡಿದೆ. ಹಾಗಾಗಿ ಎಲ್ಲ ನಾಯಕ ನಟರಂತೆ ನಾನಲ್ಲ ಎನ್ನುತ್ತಾರೆ ಗಣೇಶ್.
ಸದ್ಯಕ್ಕೆ ಕಾಯಕವೇ ಕೈಲಾಸ ಅರ್ಥಾತ್ ಕೆಲಸವೇ ನನ್ನ ಬೆಸ್ಟ್ ಫ್ರೆಂಡ್ ಎನ್ನುವ ಗಣೇಶ್, ಈಗೆಲ್ಲಾ ಸಮಯ ಸಾಲಲ್ಲ. ನನಗೆ ಕೆಲಸವೇ ಈಗ ಮುಖ್ಯ. ಆರು ತಿಂಗಳಿಗೊಮ್ಮೆಯೆಲ್ಲಾ ನನ್ನ ಕ್ಲಾಸ್‌ಮೇಟ್ಸನ್ನು ಭೇಟಿಯಾಗ್ತೀನಿ. ಹರಟುತ್ತೇನೆ. ಆದರೆ ಆಗಾಗ ಭೇಟಿಯಾಗುತ್ತಿರಲು ನನಗೀಗ ಸಮಯವಿಲ್ಲ ಎನ್ನುತ್ತಾರೆ ಗಣೇಶ್. ಸದ್ಯಕ್ಕೆ ತನ್ನ ಹೆಂಡತಿಯ ನಿರ್ಮಾಣದಲ್ಲಿ ವರ್ಷಕ್ಕೊಂದು ಚಿತ್ರ ಮಾಡುವ ಕನಸು ಹೊತ್ತಿರುವ ಗಣೇಶ್ ಇನ್ನೂ ಸಾಕಷ್ಟು ಕನಸು ಹೊತ್ತಿದ್ದಾರೆ. ಅವೆಲ್ಲ ಕನಸು ನನಸಾಗಲಿ ಎಂದು ಹಾರೈಸೋಣ.