ಸಾಲು ಸಾಲು ಚಿತ್ರ ನೀಡುತ್ತಿರುವ ನಟಿ ರಾಗಿಣಿ ಬಗ್ಗೆ ಗಾಂಧಿನಗರದಲ್ಲಿ ಒಂದಿಷ್ಟು ಗುಸು ಗುಸು ಕೇಳಿ ಬರುತ್ತಿದೆ. ಇಷ್ಟೊಂದು ಸಿನಿಮಾ ಮಾಡುತ್ತಾ ಹೋದರೆ ಹೆಚ್ಚು ದಿನ ಸಿನಿಮಾ ಜಗತ್ತಿನಲ್ಲಿ ಬಾಳೋದು ಕಷ್ಟ, ತಾಳಿದವನು ಬಾಳಿಯಾನು ಎಂದು ಗಾಂಧಿನಗರ ಕಿವಿ ಮಾತು ಹೇಳುತ್ತಿದೆ.
ಹಾಗಂತ ರಾಗಿಣಿ ಅವರಾಗಿಯೇ ಅವಕಾಶವನ್ನು ಅರಸುತ್ತಾ ಹೋಗಿಲ್ಲ. ವೀರ ಮದಕರಿ ಸಹಿ ಮಾಡಿ ಜುಂ ಜುಂ ಮಾಯಾ.. ಅಂದಿದ್ದೇ ಸಾಕಾಯ್ತು. ಸಾಲು ಸಾಲು ಚಿತ್ರಗಳ ಆಫರ್ ಬರಲಾರಂಭಿಸಿದವು. ಎಲ್ಲವೂ ಉತ್ತಮ ಚಿತ್ರಗಳೇ. ಹೋಳಿ, ಐಪಿಎಸ್ ಶಂಕರ್, ನಾಯಕ, ಗಂಡೆದೆ, ವೀರಬಾಹು ಇತ್ಯಾದಿ.
ಫೆಮಿನಾ ಮಿಸ್ ಇಂಡಿಯಾ ರನ್ನರ್ ಅಪ್ ಆಗಿದ್ದ ಈ ಚೆಲುವೆಯನ್ನು ಹಾಕಿಕೊಂಡು ಚಿತ್ರ ಮಾಡಲು ನಿರ್ಮಾಪಕರು ಇಂದಿಗೂ ಅಪಾರ ಆಸಕ್ತಿ ತೋರುತ್ತಿದ್ದಾರೆ. ರಾಗಿಣಿ ಇದ್ದರೆ ಚಿತ್ರ ಗೆಲ್ಲುತ್ತದೆ ಎಂಬ ಮಟ್ಟಿನ ನಿಲುವು ನಿರ್ಮಾಪಕರದ್ದಾಗಿದೆ. ಮಾದಕ ಮೈಮಾಟದ ಈಕೆ ಬಿಕಿನಿ ತೊಟ್ಟು ಬಾಲಿವುಡ್ಡಿನಲ್ಲೂ ಹೆಸರು ಮಾಡಿದ್ದಾರೆ. ಆದರೆ ಈಕೆಗೆ ನೆಲೆ ಕೊಟ್ಟಿದ್ದು ಮಾತ್ರ ಕನ್ನಡದ ನೆಲ. ಕನ್ನಡದ ನೋಡುಗರು. ಈಕೆ ಒಬ್ಬ ನಟಿ ಎಂದು ಸಾಬೀತಾಗಿದ್ದು, ಇಲ್ಲಿಯೇ!
ಉತ್ತಮ ಅಭಿನೇತ್ರಿಯೂ ಆಗಿರುವ ಇವರಿಗೆ ಜನ ಬೆಂಬಲ ಸಿಕ್ಕಿದ್ದು ಅಚ್ಚರಿಯೇನು ಅಲ್ಲ. ಇವರ ಅಭಿನಯದ ವೀರ ಮದಕರಿಯನ್ನು ಜನ ಎಷ್ಟು ಇಷ್ಟಪಟ್ಟರೆಂದರೆ, ಒಂದು ಹಂತದಲ್ಲಿ ನಾಯಕ ಸುದೀಪ್ ಇವರೆದುರು ಮಂಕಾಗಿ ಹೋಗಿದ್ದರು. ಐಪಿಎಸ್ ಶಂಕರ್ ಚಿತ್ರದಲ್ಲಿನ ಹಸಿಬಿಸಿ ಚಿತ್ರಗಳು ಇವರಿಗೆ ಇನ್ನಷ್ಟು ಪಡ್ಡೆ ಹುಡುಗರ ಬೆಂಬಲ ಸಿಗುವಂತೆ ಮಾಡಿದವು.
ಇವರ ಅಭಿನಯದ ನಾಯಕ, ಗಂಡೆದೆ ಮತ್ತಿತರ ಚಿತ್ರಗಳು ಇನ್ನೇನು ಬಿಡುಗಡೆ ಕಾಣಬೇಕಿದೆ. ಹೆಚ್ಚು ಚಿತ್ರದಲ್ಲಿ ಅಭಿನಯಿಸಿದಂತೆ ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಬಹುದೆಂಬ ಲಾಜಿಕ್ ಸುಳ್ಳು. ಕೆಲವೇ ಚಿತ್ರದಲ್ಲಿ ನಟಿಸಿದರೂ, ಹೆಸರಲ್ಲಿ ಉಳಿಯುವ ಪಾತ್ರ ಮಾಡುವ ಕಾರ್ಯ ರಾಗಿಣಿಯಿಂದ ಇನ್ನೂ ಆಗಿಲ್ಲ. ಅತ್ತ ಕಡೆಯೂ ರಾಗಿಣಿ ಗಮನ ಹರಿಸಿದರೆ, ಖಂಡಿತ ಆಕೆಗೆ ಉಜ್ವಲ ಭವಿಷ್ಯವಿದೆ.