ಲವ್ ಗುರು ಚಿತ್ರದ ನಂತರ ಮತ್ತೆ ತರುಣ್, ರಾಧಿಕಾ ಪಂಡಿತ್ ಹಾಗೂ ದಿಲೀಪ್ ರಾಜ್ ಜೋಡಿ ಜೊತೆ ಸೇರಿದೆ. ತರುಣ್, ರಾಧಿಕಾ ಹಾಗೂ ದಿಲೀಪ್ ರಾಜ್ ಅಭಿನಯದ ತ್ರಿಕೋಣ ಪ್ರೇಮಕಥೆಯನ್ನು ಒಳಗೊಂಡಿರುವ ಗಾನಾ ಬಜಾನಾ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ.
ಹಾಡಿನ ಚಿತ್ರೀಕರಣ ಭರದಿಂದ ಸಾಗಿದ್ದು, ನಟರು ಹಾಗೂ ನಟಿ ಕುಣಿದಾಡಲು ಆರಂಭಿಸಿದ್ದಾರೆ. ಪ್ರಶಾಂತ್ ರಾಜ್ ನಿರ್ದೇಶನದ ಈ ಚಿತ್ರಕ್ಕೆ ಶೇಖರ್ ಛಾಯಾಗ್ರಹಣ ಲಭಿಸಿದೆ. ರವಿಶಂಕರ್ ಹಾಗೂ ನರಸಿಂಹ ನಿರ್ಮಾಣ ನಿರ್ವಹಣೆಯ ಹೊಣೆ ವಹಿಸಿಕೊಂಡಿದ್ದರೆ, ಇಸ್ಮಾಯಿಲ್ ಕಲಾ ನಿರ್ದೇಶಕರ ಸ್ಥಾನವನ್ನು ಅಲಂಕರಿಸಿದ್ದಾರೆ.
ತರುಣ್, ರಾಧಿಕಾ, ದಿಲೀಪ್ ರಾಜ್ ಅಲ್ಲದೇ ಚಿತ್ರದಲ್ಲಿ ಮಂಜುನಾಥ್ ಹೆಗ್ಡೆ, ಯಶವಂತ ಸರದೇಶ್ಪಾಂಡೆ, ಶರಣ್, ಸಿ.ಆರ್.ಸಿಂಹ, ಲಲಿತಾ, ಲಕ್ಷ್ಮಿದೇವಮ್ಮ ಮುಂತಾದವರು ಇದ್ದಾರೆ. ಚಿತ್ರದ ಹಾಡಿನ ಚಿತ್ರೀಕರಣದ ಜತೆ, ರೀ ರೆಕಾರ್ಡಿಂಗ್ ಕಾರ್ಯವೂ ಭರದಿಂದ ಸಾಗಿದೆ. ಸಂಗೀತ ನಿರ್ದೇಶಕ ಜೋಶ್ವಾ ಶ್ರೀಧರ್ ತಮ್ಮ ಎರಡನೇ ಚಿತ್ರವಾದ ಗಾನಾ ಬಜಾನಾಕ್ಕೆ ಒಳ್ಳೆ ಟ್ಯೂನ್ ಸೆಟ್ ಮಾಡುವ ಕಾರ್ಯವನ್ನು ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಕುಳಿತು ಮಾಡುತ್ತಿದ್ದಾರೆ.
ಚಿತ್ರದ ಚಿತ್ರೀಕರಣ, ರೆಕಾರ್ಡಿಂಗ್ ಹಾಗೂ ಇತರೆ ಎಲ್ಲಾ ಕೆಲಸ ಅತಿ ವೇಗವಾಗಿ ಸಾಗುತ್ತಿರುವುದು ನಿರ್ಮಾಪಕ ನವೀನ್‌ರಿಗೆ ಅತ್ಯಂತ ಸಂತಸ ತಂದಿದೆ. ಎಲ್ಲೆಡೆ ಓಡಾಡಿಕೊಂಡಿರುವ ನಿರ್ಮಾಪಕರು ಈ ಚಿತ್ರದ ಮೇಲೆ ಭಾರೀ ನೀರೀಕ್ಷೆ ಹೊಂದಿದ್ದಾರೆ. ಇತ್ತೀಚೆಗೆ ಬರುತ್ತಿರುವ ಪ್ರೀತಿ, ಪ್ರೇಮ ಆಧಾರಿತ ಚಿತ್ರಗಳು ಸೋಲುತ್ತಿರುವಾಗ ತಾವು ಗೆದ್ದೇ ಗೆಲ್ಲಬೇಕು ಎಂಬ ಛಲ ಇವರಲ್ಲಿ ಮೂಡಿದೆ. ಅಷ್ಟೇ ಗುಣಮಟ್ಟದಲ್ಲಿ ಚಿತ್ರವನ್ನು ಸಿದ್ಧಪಡಿಸುತ್ತಿದ್ದಾರೆ ಅಂದರೂ ತಪ್ಪಿಲ್ಲ. ಆಲ್ ದಿ ಬೆಸ್ಟ್ ಹೇಳೋಣ.