ನಿಮಗೆ ಪೊರ್ಕಿ ಪ್ರಣೀತಾ ಗೊತ್ತಿರಬೇಕಲ್ಲಾ. ಹಾಗಲ್ಲ ಸ್ವಾಮಿ, ಪೊರ್ಕಿ ಚಿತ್ರದಲ್ಲಿ ದರ್ಶನ್ ಜತೆ ಅಭಿನಯಿಸಿದ್ದಳಲ್ಲಾ ಆ ಪ್ರಣೀತಾ. ಹೌದು. ಚಿತ್ರದಲ್ಲಿ ಕೊಂಚ ನಖರಾ ಮಾಡಿಕೊಂಡು ಸುದ್ದಿಯಾಗಿದ್ದ ಈ ನಟಿ ತನಗೆ ಸಿಗಬೇಕಿದ್ದ ಅವಕಾಶವನ್ನೂ ಅದೇ ವಿಷಯದಲ್ಲಿ ಕೈಚೆಲ್ಲಿಕೊಂಡರು ಅಂದರೆ ತಪ್ಪಿಲ್ಲ.
ಉತ್ತಮ ಮೈಮಾಟ, ಮಾದಕ ನೋಟದ ಈ ತುಂಬುಕಣ್ಣಿನ ಚೆಲುವೆ ಎಲ್ಲವೂ ಇದ್ದು, ಇರಬಾರದಷ್ಟು ನಖರಾ ಇಟ್ಟುಕೊಂಡು ಎಲ್ಲವನ್ನೂ ಹಾಳುಮಾಡಿಕೊಂಡಿದ್ದಾರೆ. ಇದರಿಂದ ಇವರಿಗೆ ಇದೀಗ ಕನ್ನಡದ ಅವಕಾಶಗಳು ತಪ್ಪಿ, ಪ್ರವೇಶ ಸಂಪೂರ್ಣ ಮುಚ್ಚಿದೆ ಅಂದರೂ ತಪ್ಪಾಗಲಾರದು.
ಇದರಿಂದ ನಟಿಮಣಿ ಅನಿವಾರ್ಯವಾಗಿ ಟಾಲಿವುಡ್ಡಿನತ್ತ ಪಾದ ಬೆಳೆಸಲು ನಿರ್ಧರಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಪೊರ್ಕಿಯಲ್ಲಿ ನಟಿಸಿದ್ದೇ ಇವರ ಪಾಲಿಗೆ ದೊಡ್ಡದು. ಲೂಸ್ ಮಾದ ಯೋಗೀಶ್‌ನ ಸಂಬಂಧಿಯೂ ಆಗಿರುವ ಈಕೆ ಲೂಸ್ ಲೂಸ್ ಆಗಿ ಆಡಿ ಅವಕಾಶ ಕಳೆದುಕೊಂಡಿದ್ದಾಳೆ ಅನ್ನುತ್ತಿದ್ದಾರೆ ಗಾಂಧಿನಗರದ ಜನ.
ಇವರಿಗೆ ಪೊರ್ಕಿ ನಂತರ ಯಶ್ ಹಾಗೂ ಯೋಗೀಶರ ಚಿತ್ರದಲ್ಲಿ ಅವಕಾಶಗಳು ಅರಸಿ ಬಂದವು. ಅದನ್ನವರು ತಿರಸ್ಕರಿಸಿದರು. ಇದೀಗ ಏನೂ ಇಲ್ಲ ಅನ್ನುವಂತಾಗಿದೆ. ಎಲ್ಲೂ ಅವಕಾಶ ಇಲ್ಲ. ತಮಿಳು ಕಡೆ ಮುಖ ಹಾಕುವುದು ಅನಿವಾರ್ಯವಾಗಿದೆ. ಒಮ್ಮೆ ದೊಡ್ಡ ಸ್ಟಾರ್ ಜತೆ ಅಭಿನಯಿಸಿದ್ದೇನೆ, ಚಿಕ್ಕವರ ಜತೆ ನನಗೇನು ಕೆಲಸ ಅಂದುಕೊಂಡಿದ್ದೇ ಇವರಿಗೆ ಇಂದು ಮುಳುವಾಗಿದೆ. ಆದರೂ, ತೆಲುಗಿನಲ್ಲಿ ಭರ್ಜರಿ ಅವಕಾಶಗಳೇ ದಕ್ಕಿವೆ. ಇನ್ನೇನಾಗುವುದೋ ದೇವರೇ ಬಲ್ಲ.