ಮಹೇಶ್ ಬಾಬು ನಿರ್ದೇಶನದ ಚಿರು ಬಿಡುಗಡೆಗೆ ಸರ್ವ ರೀತಿಯಲ್ಲೂ ಸಿದ್ಧವಾಗಿದೆ. ಸಂಗೀತಮಯ ಲವ್ ಸ್ಟೋರಿಯಾಗಿರುವ ಈ ಚಿತ್ರದಲ್ಲಿ ಅರ್ಜುನ್ ಸರ್ಜಾರ ಸಂಬಂಧಿ ವಾಯುಪುತ್ರ ಖ್ಯಾತಿಯ ಚಿರಂಜೀವಿ ಸರ್ಜಾ ಅಭಿನಯಿಸಿದ್ದು, ಬಹು ನಿರೀಕ್ಷೆಯನ್ನು ಮೂಡಿಸಿರುವ ರಾಜ್ಯಾದ್ಯಂತ ಶೀಘ್ರವೇ ತೆರೆ ಕಾಣುತ್ತಿದೆ.
ರಮ್ಯಾ, ಪುನಿತ್ ರಾಜ್ ಕುಮಾರ್ ಅಭಿನಯದ ಆಕಾಶ್ ಚಿತ್ರದ ಮಾದರಿಯ ವಿಭಿನ್ನ ಲವ್ ಸ್ಟೋರಿಯನ್ನು ಇದು ಒಳಗೊಂಡಿದೆಯಂತೆ. ಚಿತ್ರದ ನಾಯಕಿಯಾಗಿ ಕೃತಿ ಅಭಿನಯಿಸಿದ್ದಾರೆ. ಇವರಿಗೆ ಇದು ಕನ್ನಡದ ಮೊದಲ ಚಿತ್ರ. ಹೀಗಾಗಿ ಸಹಜವಾಗಿಯೇ ಅವರಿಗೆ ಬಹುನಿರೀಕ್ಷೆಯಿದೆ. ಕನ್ನಡದಲ್ಲಿ ನೆಲೆ ಕಾಣಲು ಸಾಕಷ್ಟು ನಾಯಕಿಯರು ತವಕಿಸುತ್ತಿದ್ದು, ಅವರ ಪಟ್ಟಿಯಲ್ಲಿ ಕೃತಿ ಕೂಡಾ ಸೇರಿದ್ದಾರೆ.
ಚಿತ್ರದಲ್ಲಿ ಈಕೆ ರಾಜ್ಯದ ಪ್ರಭಾವಿ ಸಚಿವರೊಬ್ಬರ ಪುತ್ರಿಯಾಗಿ ನಟಿಸಿದ್ದಾರೆ. ಸಚಿವರ ಪಾತ್ರದಲ್ಲಿ ಪೋಷಕ ನಟ ರಂಗಾಯಣ ರಘು ಅಭಿನಯಿಸಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿವೆ. ಇವುಗಳ ಪೈಕಿ ಒಂದನ್ನು ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಶೂಟಿಂಗ್ ಮಾಡಲಾಗಿದೆ.
ಅಂದಹಾಗೆ, ಚಿತ್ರದಲ್ಲಿ ಬುಲೆಟ್ ಪ್ರಕಾಶ್‌ಗೆ ನಾಯಕ ನಾಯಕಿಯರನ್ನು ಹಿಂಬಾಲಿಸುವ ಕೆಲಸ. ಪರಮೇಶಿ ಪಾನ್‌ವಾಲಾ ಚಿತ್ರದ ನಂತರ ನಿರ್ದೇಶಕ ಮಹೇಶ್ ಬಾಬು ಈ ಚಿತ್ರಕ್ಕೆ ಕೈಹಾಕಿದ್ದಾರೆ. ಚಿತ್ರ ಶೂಟಿಂಗ್ ಮುಗಿದಿದ್ದು, ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.