ಮಂಡ್ಯದ ಗಂಡು ಅಂಬರೀಶ್ ಅಭಿನಯಿಸಿರುವ, ಸುದೀಪ್ ಇರುವ ಭಾರೀ ಬಜೆಟ್ಟಿನ ಚಿತ್ರ ವೀರ ಪರಂಪರೆ. ಇದನ್ನು ಎಸ್ ನಾರಾಯಣ್ ನಿರ್ಮಿಸಿ, ನಿರ್ದೇಶಿಸುತ್ತಿರುವುದು ನಿಮಗೆಲ್ಲಾ ಗೊತ್ತು. ವಿಶೇಷ ಅಂದರೆ ಮೊನ್ನೆ ಮೊನ್ನೆ ಶೂಟಿಂಗ್ ಆರಂಭಿಸಿದ್ದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದು ಹೋಗಿದೆಯಂತೆ!
ಗೌಡರ ಗತ್ತಿನಲ್ಲಿ ಗೋಚರಿಸುವ ಅಂಬರೀಶ್‌ಗೆ ಇದು ಸೆಕೆಂಡ್ ಇನ್ನಿಂಗ್ಸಿನಲ್ಲಿ ನಿರೀಕ್ಷಿಸುತ್ತಿರುವ ಗೆಲುವನ್ನು ತಂದುಕೊಡುತ್ತದೆಯೇ ಎಂಬುದು ಗೊತ್ತಿಲ್ಲ. ಆದರೆ, ಒಂದು ವಿಭಿನ್ನ ಗೆಟಪ್ಪಿನಲ್ಲಿ ಅಂಬರೀಶ್ ಈ ಚಿತ್ರದಲ್ಲಿ ದರ್ಶನ ನೀಡಲಿದ್ದಾರಂತೆ. ಇವರ ಜತೆ ಮಗನಾಗಿ ಸುದೀಪ್ ಅಪ್ರತಿಮ ನಟನೆ ನೀಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಎಸ್. ನಾರಾಯಣ್ ಪೂರ್ಣ ಪ್ರಮಾಣದಲ್ಲಿ ತೊಡಗಿರುವ ಈ ಚಿತ್ರದ ಚಿತ್ರೀಕರಣ ಮುಗಿಯುವ ಹಂತದಲ್ಲಿ ಇದೆಯಂತೆ. ಇನ್ನು ಕೆಲವೇ ದಿನ ಶೂಟಿಂಗ್ ನಡೆದರೆ ಮುಗಿದೇ ಹೋಯಿತು ಅನ್ನಲಾಗುತ್ತಿದೆ.
ಅಂಬರೀಶ್ ನಟನೆಯ 3 ದಿನದ ಚಿತ್ರೀಕರಣ, ಸುದೀಪ್- ಐಂದ್ರಿತಾ ಅಭಿನಯದ ಒಂದು ಹಾಡಿನ ಚಿತ್ರೀಕರಣ ನಡೆದರೆ ಎಲ್ಲವೂ ಸಮಾಪ್ತಿ ಆದಂತೆ ಅಂತ ಹೇಳಲಾಗುತ್ತಿದೆ. ಚಿತ್ರದಲ್ಲಿ ಬರುವ ಒಂದೆರಡು ಹಾಡನ್ನು ವಿದೇಶದಲ್ಲೂ ಚಿತ್ರೀಕರಣ ಮಾಡಲಾಗಿದೆಯಂತೆ. ಸುಮಾರು 68 ದಿನ ಕಾಲ ಗೋಕಾಕ್ ಹಾಗೂ ಗುಲ್ಬರ್ಗದಲ್ಲಿ ಉರಿ ಬಿಸಿಲನ್ನೂ ಲೆಕ್ಕಿಸದೇ ಶೂಟಿಂಗ್ ಮಾಡಲಾಗಿದೆ.
ಕೊಳ್ಳೇಗಾಲದಲ್ಲೂ ಕೆಲದಿನ ಚಿತ್ರದ ಚಿತ್ರೀಕರಣ ನಡೆದಿದೆಯಂತೆ. ಎಸ್. ನಾರಾಯಣ್ ಪಾಲಿಗೆ ಇದು 17ನೇ ಚಿತ್ರ. ಒಟ್ಟಾರೆ ಎಲ್ಲಾ ಅತ್ಯುತ್ತಮವಾಗಿ ಮಾಡುವ ಯತ್ನ ನಡೆಸಿದ್ದು, ಇದಕ್ಕೆ ಇಡೀ ಚಿತ್ರತಂಡದಿಂದ ಉತ್ತಮ ಸಹಕಾರ ಸಿಕ್ಕಿದೆ ಎನ್ನಲಾಗುತ್ತಿದೆ. ಹೇಗಿದೆ ಎಂಬುದನ್ನು ಬಿಡುಗಡೆ ನಂತರ ನೋಡಬೇಕಿದೆ.