ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನಟೀಮಣಿ ರಾಧಿಕಾ ನಡುವಿನ ಸಂಬಂಧಕ್ಕೂ ಈ ವಾರ ತೆರೆಕಾಣುತ್ತಿರುವ ಚಿತ್ರ ಎರಡನೇ ಮದುವೆ ಚಿತ್ರಕ್ಕೂ ಏನೋ ಸಂಬಂಧ ಇದೆಯಂತೆ ಅಂತ ಗಾಂಧಿನಗರದ ತುಂಬ ಗುಲ್ಲು ಹಬ್ಬಿದೆ.
ಇದೇನಿದು, ಅದಾಗಲೇ ಮುಗಿದು ಹೋದ ಸುದ್ದಿ ಅಲ್ಲವಾ? ರವಿ ಬೆಳಗೆರೆ ಚಿತ್ರ ಮಾಡಲು ಹೊರಟಿದ್ದರು, ಅದೇನೋ ಮಧ್ಯಸ್ತಿಕೆ ನಡೆದು ಚಿತ್ರ ಬಿಡುಗಡೆ ಆಗಲಿಲ್ಲ ಎಂದೆಲ್ಲಾ ಕೇಳಿದ್ದೆವಲ್ಲಾ? ಇದ್ಯಾವ ಹೊಸ ಚಿತ್ರ ಅಂದುಕೊಂಡಿರಾ? ದಯವಿಟ್ಟು ಕ್ಷಮಿಸಿ. ಇದು ಆ ಚಿತ್ರವಂತೂ ಅಲ್ಲ. ಆದರೆ ಚಿತ್ರದಲ್ಲಿರುವ ಕೆಲ ಡೈಲಾಗುಗಳು ಈಗ ಹಲವರಲ್ಲಿ ಈ ಸಂಶಯ ಹುಟ್ಟಿಕೊಳ್ಳುವಂತೆ ಮಾಡಿದೆ.
ಚಿತ್ರದಲ್ಲಿ ಮುದುಕ ಪಾತ್ರದಾರಿ ಅನಂತನಾಗ್ ಹುಡುಗಿಯನ್ನು ಎರಡನೇ ಮದುವೆಯಾಗಲು ಹೊರಡುತ್ತಾನೆ. ಇದರಿಂದ ಈ ಚಿತ್ರಕ್ಕೂ, ಕುಮಾರಣ್ಣನ ಸೆಕೆಂಡ್ ಇನ್ನಿಂಗ್ಸಿಗೂ ಏನೋ ಸಂಬಂಧ ಇರಬಹುದೇ ಅಂತ ಜನ ಆಡಿಕೊಳ್ಳುತ್ತಿದ್ದಾರೆ.
ಅದೇನೇ ಇರಲಿ, ದಿನೇಶ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಅನಂತನಾಗ್ ಹಾಗೂ ಸುಹಾಸಿನಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. 'ನಾನು ಲೋಕಾಯುಕ್ತ ಕಚೇರಿಯಲ್ಲಿ ನಿಯತ್ತಾಗಿ ಕೆಲಸ ಮಾಡಿಕೊಂಡಿದ್ದೆ. ಸಿಎಂ ಮನೆ ಮೇಲೆ ರೈಡ್ ಆದ ಮಾರನೇ ದಿನ ಅವರ ಗರ್ಲ್ ಫ್ರೆಂಡ್ ಮನೇಲಿ ಬ್ಲ್ಯಾಕ್ ಮನಿ ಇದೆ ಅನ್ನುವ ಮಾತು ಕೇಳಿ ಬಂತು. ಅಲ್ಲಿ ಹೋಗಿ ರೈಡ್ ಮಾಡಿದಾಗ ಅವಳು ಮೈ ಮೇಲೆ ಬಿದ್ದಳು. ಆಕೆಯ ಸೆರಗು ಜಾರಿ ಬಿತ್ತು. ಪಾಪ ಹೆಣ್ಣಿನ ಮಾನ ಹೋಗುತ್ತಲ್ಲಾ ಅಂತ ಆಕೆಯ ಸೆರಗನ್ನು ಎತ್ತಿಕೊಟ್ಟೆ. ನಂತರ ಆಕೆ ನೋಟಿನ ಕಂತೆ ಎತ್ತಿ ಕೊಟ್ಟಳು. ಆ ಹೊತ್ತಿಗೆ ಸರಿಯಾಗಿ ಪೊಲೀಸ್ ರೈಡ್ ಆಯಿತು. ನಾನು ತಪ್ಪು ಮಾಡಿದ್ದೇನೆ ಅಂತ ಹೇಳಿ ಸಸ್ಪೆಂಡ್ ಮಾಡಿದರು' ಎಂಬ ಅನಂತನಾಗ್ ಅವರ ಡೈಲಾಗು ಚಿತ್ರದಲ್ಲಿದೆ. ಇದೇ ಡೈಲಾಗು ಕೇಳಿದವರೆಲ್ಲಾ, ಇದಕ್ಕೂ ಕುಮಾರಣ್ಣ ರಾಧಿಕಾ ಸಂಬಂಧಕ್ಕೂ ಲಿಂಕು ಹುಡುಕುತ್ತಿದ್ದಾರಂತೆ! ಯಾವುದಕ್ಕೂ ಈ ಚಿತ್ರ ಬಿಡುಗಡೆಯಾದ ಮೇಲಷ್ಟೇ ನಿಜವಾದ ಮರ್ಮ ಅರಿಯಲಿದೆ.