ಭೂಮಿ ಫಿಲಂಸ್ ಲಾಂಛನದ ಅಡಿ ನಿರ್ಮಾಣಗೊಳ್ಳುತ್ತಿರುವ 'ನಾವು ನಮ್ಮ ಹೆಂಡತಿಯರು' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು/ಎ' ಸರ್ಟಿಪಿಕೆಟ್ ಲಭಿಸಿದೆ.
ಮತ್ತೊಂದು ಹಾಸ್ಯ ಕಂ ಜೀವನದ ಸಂದೇಶ ನೀಡುವ ಮಾದರಿಯ ಚಿತ್ರ ಆಗಿದೆ. ಸಾಂಸಾರಿಕ ಜೀವನದಲ್ಲಿ ಪತಿ ಪತ್ನಿಯರ ನಡುವಿನ ಅನ್ಯೋನ್ಯತೆ ಎಷ್ಟಿರಬೇಕು ಎಂಬುದನ್ನು ಇದು ತೋರಿಸಿಕೊಡುವ ಯತ್ನ ಮಾಡುತ್ತಿದೆ. ದೊಡ್ಡಬಳ್ಳಾಪುರದ ವಿ. ಶ್ರೀನಿವಾಸಮೂರ್ತಿ ಎಂಬುವರು ನಿರ್ಮಿಸುತ್ತಿರುವ ಈ ಚಿತ್ರ ಬಹು ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಲೋ ಬಜೆಟ್ಟಿನಲ್ಲಿ ಹೈ ಥಿಂಕಿಂಗ್ ಮೂಲಕ ಈ ಚಿತ್ರದ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.
ಅತಿ ಶೀಘ್ರವೇ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಶಶಿಧರ್ ಭಟ್ ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣವನ್ನು ಆರ್. ಮಂಜುನಾಥ್ ವಹಿಸಿಕೊಂಡಿದ್ದಾರೆ. ಸಂಗೀತ ಎಸ್.ಜೆ. ಪ್ರಸನ್ನ ಅವರದ್ದು. ಸಂಕಲನವನ್ನು ಗೋವರ್ಧನ್ ಮಾಡಿದ್ದು, ಸಾಹಿತ್ಯ ಶಿವನಂಜೇಗೌಡರದ್ದಾಗಿದೆ.
ಕಲೆ ಹೊಸ್ಮನೆ ಮೂರ್ತಿ, ನೃತ್ಯ ಕಪಿಲ್, ಸಹ ನಿರ್ದೇಶನ ಸತೀಶ್ ಹಾಗೂ ನಿರ್ವಹಣೆ ಅಚ್ಯುತ್ ರಾವ್ ಅವರದ್ದು. ತಾರಾ ಬಳಗದಲ್ಲಿ ಹರೀಶ್ ರಾಜ್, ಅಶ್ವಿನಿ, ನೇತ್ರಾಶೆಟ್ಟಿ, ಪ್ರಕಾಶ್, ಮಂಡ್ಯ ರಮೇಶ್, ನಂದಿನಿ ಪಟವರ್ಧನ್ ಮತ್ತಿತರರು ಇದ್ದಾರೆ.