ಕಿರಣ್ ಐ ಲವ್ ಯೂ ಅಂದ್ರು, ನಟಿ ರೇಖಾ ರಿಜೆಕ್ಟ್ ಮಾಡಿದ್ರು!
MOKSHA
ಹೌದು. ನಟ ಕಿರಣ್ ಐ ಲವ್ ಯೂ ಅಂದ್ರಂತೆ. ನಟಿ ರೇಖಾಗೆ ಅದ್ಯಾಕೆ ಸಿಟ್ಟು ಬಂತೋ ಗೊತ್ತಿಲ್ಲ. ರಿಜೆಕ್ಟ್ ಮಾಡಿದ್ರಂತೆ. ಜೊತೆಗೆ ಬುದ್ಧಿ ಮಾತನ್ನೂ ಹೇಳಿದ್ರಂತೆ. ಯಾಕಪ್ಪ ಕಿರಣ್ ಐ ಲವ್ ಯೂ ಅಂದ್ರು ಎನ್ನಬೇಡಿ. ಇದು ಸಿನಿಮಾದ ಪ್ರೇಮ ಚಂದ್ರಮ ಚಿತ್ರದ ದೃಶ್ಯ. ಇತ್ತೀಚೆಗೆ ಚಿತ್ರೀಕರಣ ಸಕಲೇಶಪುರದಲ್ಲಿ ನಡೆದಿತ್ತು. ಜೇನುಕಲ್ಲು ಚಿತ್ರಾಲಯ ಲಾಂಛನದ ಅಡಿ ಯು.ಇ. ಗಣೇಶ್, ಜಿ. ಕುಮಾರ್, ಜಿ.ಎಸ್. ಜಗದೀಶ್ ಹಾಗೂ ಸುನಿಲ್ ಕುಮಾರ್ ಶಿಂಧೆ ನಿರ್ಮಿಸುತ್ತಿರುವ ಈ ಮಹತ್ವಾಕಾಂಕ್ಷೆಯ ಹಾಗೂ ದೊಡ್ಡ ಬಜೆಟ್ಟಿನ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಅಪಾರ ಸಂಖ್ಯೆಯ ಜನ ಚಿತ್ರದ ಚಿತ್ರೀಕರಣ ವೀಕ್ಷಿಸಲು ಆಗಮಿಸುತ್ತಿದ್ದಾರೆ.
ನಾಯಕನಿಗೆ ನಾಯಕಿಯ ಮೇಲೆ ಪ್ರೀತಿ ಹುಟ್ಟಿದ ಸಮಯದ ದೃಶ್ಯಾವಳಿಯನ್ನು ಇಲ್ಲಿ ಈಗ ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಬಹು ಸಮಯದಿಂದ ನಾಯಕಿಗೆ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳಬಯಸಿದ್ದ ನಾಯಕ ಒಂದು ಸಂದರ್ಭದಲ್ಲಿ ಇದೇ ಸೂಕ್ತ ಸಮಯ ಎಂದು ಹೇಳಿಕೊಳ್ಳಲು ಮುಂದಾಗುತ್ತಾನೆ. ಹೇಳಿಯೂ ಬಿಡುತ್ತಾನೆ. ಆದರೆ ಆತನ ಪ್ರೀತಿಯನ್ನು ತಿರಸ್ಕರಿಸುವ ಆಕೆ ವೃತ್ತಿಯಲ್ಲಿ ವೈದ್ಯನಾಗಿರುವ ನೀನು ಈ ರೀತಿ ಕಂಡ ಕಂಡ ಹೆಣ್ಣುಮಕ್ಕಳಿಗೆ ಗೋಳು ಹೊಯ್ದುಕೊಳ್ಳುವುದು ಸರಿಯಲ್ಲ ಎಂದು ಹೇಳಿ ಹೊರಟು ಹೋಗುತ್ತಾಳೆ. ಈ ಸನ್ನಿವೇಶದ ಚಿತ್ರೀಕರಣ ಅಲ್ಲಿ ನಡೆಯಿತು.
ನಟ ಕಿರಣ್ ಹಾಗೂ ನಟಿ ರೇಖಾ ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡು ನಟಿಸಿದರು. ಸಕಲೇಶಪುರದಲ್ಲಿ ಈ ಸಂದರ್ಭದಲ್ಲಿ ಮಳೆ ಸಹ ಸುರಿಯುತ್ತಿತ್ತು. ಚಿತ್ರ ತಂಡ ಅದನ್ನೂ ಲೆಕ್ಕಿಸದೇ ಶೂಟಿಂಗ್ ಕಾರ್ಯವನ್ನು ನಡೆಸಿಯೇ ಬಿಟ್ಟಿತು. ಇದಲ್ಲದೇ ಕಾಗಿನೆಲೆ ಮತ್ತಿತತರ ತಾಣಗಳಲ್ಲೂ ಚಿತ್ರದ ಶೂಟಿಂಗ್ ನಡೆಯಲಿದೆ ಎನ್ನುತ್ತಾರೆ ಶಿಂಧೆ. ಚಿತ್ರದಲ್ಲಿ ಇಬ್ಬರು ನಾಯಕರಿದ್ದು ಕಿರಣ್ ಹಾಗೂ ರಘು ಮುಖರ್ಜಿ ಇದ್ದಾರೆ.