ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದೀರ್ಘ ಕಾಲದ ನಂತರ ತಮಿಳುನಾಡಿಗೂ ಲಗ್ಗೆಯಿಟ್ಟ ಕನ್ನಡ ಚಿತ್ರ! (Eradane Maduve | Kannada Cinema | Tamilnadu | Chennai | Mungaru Male)
ದೀರ್ಘ ಕಾಲದ ನಂತರ ತಮಿಳುನಾಡಿಗೂ ಲಗ್ಗೆಯಿಟ್ಟ ಕನ್ನಡ ಚಿತ್ರ!
PR
ತಮಿಳುನಾಡಿನಲ್ಲಿ ಕನ್ನಡಿಗರು ಕನ್ನಡ ಚಿತ್ರ ನೋಡೋಕೆ ಸಾಧ್ಯವಿಲ್ಲ. ಕಾರಣ ಅಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯೇ ಆಗೋದಿಲ್ಲ. ಮುಂಗಾರು ಮಳೆ ಚೆನ್ನೈ ಚಿತ್ರಮಂದಿರಗಳಲ್ಲಿ ಮಳೆ ಸುರಿಸಿದ ಮೇಲೆ ಮತ್ಯಾವ ಚಿತ್ರಗಳೂ ಚೆನ್ನೈ ಕಡೆ ತಲೆ ಹಾಕಿಯೂ ಮಲಗಲಿಲ್ಲ. ಪ್ರೇಮ್ ನಿರ್ದೇಶನದ ರಾಜ್ ಚಿತ್ರ ಚೆನ್ನೈಯಲ್ಲೂ ಬಿಡುಗಡೆಯಾಗುತ್ತದೆ ಎಂದು ಸುದ್ದಿಯಿದ್ದರೂ, ಬಿಡುಗಡೆಯ ಭಾಗ್ಯ ಕಾಣಲಿಲ್ಲ. ಇದೀಗ ಚೆನ್ನೈ ಕನ್ನಡಿಗರಿಗೆ ಸಂತಸದ ಸುದ್ದಿಯಿದೆ. ಕಾರಣ ಸುದೀರ್ಘ ಕಾಲದ ನಂತರ ಕನ್ನಡ ಚಿತ್ರವೊಂದು ಚೆನ್ನೈ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟಿದೆ. ಅದು ಎರಡನೇ ಮದುವೆ!
ಕನ್ನಡ ನಾಡಿನಲ್ಲಿ ಹಿಂದಿ, ತಮಿಳು, ತೆಲುಗು ಚಿತ್ರಗಳು ಸೂಪರ್ ಹಿಟ್ ಆಗೋದು ಹೊಸತೇನಲ್ಲ. ಆದರೆ ಹೊರ ರಾಜ್ಯಗಳಲ್ಲಿ ಕನ್ನಡ ಚಿತ್ರ ಬಿಡುಗಡೆಯಾಗೋದು ಅಂದರೆ ಸುಲಭದ ಮಾತಲ್ಲ ಬಿಡಿ. ಇದೀಗ ಎರಡನೇ ಮದುವೆ ಅಂಥದ್ದೊಂದು ಸಾಧನೆ ಮಾಡಿದೆ. ಚೆನ್ನೈಯ ಪಿವಿಆರ್ ಸಿನೆಮಾಸ್, ಕ್ಯಾಸಿನೋ ಹಾಗೂ ಮಾಯಾಜಾಲ್ ಚಿತ್ರಮಂದಿರಗಳಲ್ಲಿ ಕೆಲವು ದಿನಗಳ ಕಾಲ ಅನಂತನಾಗ್ ಸುಹಾಸಿನಿ ಜೋಡಿಯ ಕಾಮಿಡಿ ಚಿತ್ರ ಎರಡನೇ ಮದುವೆ ಪ್ರದರ್ಶನಗೊಳ್ಳಲಿದೆ.
ಚಿತ್ರ ಈಗಾಗಲೇ ಇದೇ ಶುಕ್ರವಾರ ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿದೆ. ಇದೇ ಸಂದರ್ಭ (9ನೇ ಜುಲೈ) ಚೆನ್ನೈ ಚಿತ್ರಮಂದಿರಗಳಲ್ಲೂ ಪ್ರದರ್ಶನ ಆರಂಭಗೊಳ್ಳಲಿದೆ. ಪಿವಿಆರ್ ಸಿನೆಮಾಸ್ ಚಿತ್ರಮಂದಿರಗಳಲ್ಲಿ ಜು.9ರಂದು ಸಂಜೆ 7 ಗಂಟೆಗೆ ಚಿತ್ರ ಪ್ರದರ್ಶನ ಇರಲಿದೆ. ಉಳಿದಂತೆ ಜು.10 ಹಾಗೂ 11ರಂದು ಬೆಳಿಗ್ಗೆ 10.45 ಹಾಗೂ ಸಂಜೆ 7 ಗಂಟೆ ಪ್ರದರ್ಶನಗೊಳ್ಳಲಿದೆ. ಜು.12 ಹಾಗೂ 13ರಂದು ಸಂಜೆ ಏಳು ಗಂಟೆ ಶೋ ಇರಲಿದೆ.
ಇನ್ನು ಕ್ಯಾಸಿನೋ ಚಿತ್ರಮಂದಿರಗಳಲ್ಲಿ ಜು.9 ಹಾಗೂ 10ರಂದು ಎರಡು ದಿನ ಸಂಜೆ 3.30 ಹಾಗೂ ರಾತ್ರಿ 10 ಗಂಟೆಗೆ ಶೋ ಇರಲಿದೆ. ಬೃಹತ್ ಮಾಯಾಜಾಲ್ ಚಿತ್ರಮಂದಿರದಲ್ಲಿ ಜು.9, 10 ಹಾಗೂ 11ರಂದು ಸಂಜೆ 4.45ಕ್ಕೆ ಚಿತ್ರ ಪ್ರದರ್ಶನ ಇರಲಿದೆ.
ತಮಿಳುನಾಡಿಗೆ ಬಂದ ಚಿತ್ರ ಭರ್ಜರಿ ಹಿಟ್ ಆಗಲಿ. ಆ ಮೂಲಕ ಇನ್ನೂ ಹೆಚ್ಚು ಹೆಚ್ಚು ಕನ್ನಡ ಚಿತ್ರಗಳು ಹೊರರಾಜ್ಯಗಳಲ್ಲಿ ಪ್ರದರ್ಶನ ಕಾಣಲಿ ಎಂದು ಹಾರೈಸೋಣ.