ಎಲ್ಲಾ ಆಗಿ ಈಗ ನಮ್ಮ ಶಿವಣ್ಣ ಮೈಕೆಲ್ ಜಾಕ್ಸನ್ ಆಗಲು ಹೊರಟಿದ್ದಾರೆ. ನಿಜಕ್ಕೂ ಇದೊಂದು ಭಾರೀ ಬದಲಾವಣೆವೇ ಸರಿ. ಒಬ್ಬರನ್ನು ಅನುಕರಿಸುವುದು ಕನ್ನಡ ಚಿತ್ರರಂಗದ ಬಹು ಹಿಂದಿನ ಸಂಪ್ರದಾಯ. ಆದರೆ ಮೈಕಲ್ ಜಾಕ್ಸನ್ ಅವರನ್ನು ಅನುಕರಿಸಿ ಮತ್ತೊಂದು ಸಾಹಸ ಮಾಡಹೊರಟಿದ್ದಾರೆ ನಮ್ಮ ಶಿವಣ್ಣ.
ತಮ್ಮ ಮೈಲಾರಿ ಚಿತ್ರದ ಹಾಡೊಂದರಲ್ಲಿ ಅವರು ಮೈಕೆಲ್ ಆಗುವ ಯತ್ನ ಮಾಡಿದ್ದಾರೆ. ಮೈಕೆಲ್ ಜಾಕ್ಸನ್ ನಮ್ಮನ್ನು ಅಗಲಿ ಒಂದು ವರ್ಷ ಆಗಿದೆ. ಇಂದಿಗೂ ಅವರ ನೆನಪು ಹಸಿಯಾಗಿಯೇ ಇದೆ. ಈ ನಡುವೆ ಕನ್ನಡದಲ್ಲಿ ಅವರನ್ನು ಹಾಡಿ ಹೊಗಳುವ ಕಾರ್ಯ ಹಲವು ಸಂದರ್ಭದಲ್ಲಿ ಆಗಿದೆ. ಎಲ್ಲವೂ ಆಗಿ ಈಗ ಶಿವಣ್ಣನ ಮೂಲಕ ಜಾಕ್ಸನ್ ಮೈಲಾರಿ ಚಿತ್ರದಲ್ಲಿ ಮರು ಜನ್ಮ ತಾಳಿದ್ದಾರೆ.
ಶಿವಣ್ಣ ಮೈಲಾರಿಯಲ್ಲಿ ಇಂಥದ್ದೊಂದು ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಫೋಟೋಗಳನ್ನು ನೋಡಿದಾಗ ಇದು ಹೌದೆಂದು ಅನ್ನಿಸುತ್ತದೆ. ಈಗಾಗಲೇ ಮಾತಿನ ಭಾಗ ಪೂರೈಸಿರುವ ಮೈಲಾರಿ ಸದ್ಯದಲ್ಲೇ ಹಾಡಿನ ಶೂಟಿಂಗ್ ನಡೆಯಲಿದೆ. ನಿರ್ಮಾಪಕ ಶ್ರೀಕಾಂತ್ ಅದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.
ನಿರ್ದೇಶಕ ಆರ್. ಚಂದ್ರು ಕೂಡ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರಂತೆ. ಅಕ್ಟೋಬರ್ ಮೊದಲ ವಾರ ಚಿತ್ರವನ್ನು ತೆರೆಗೆ ತರಬೇಕೆಂದು ತಂಡ ಯತ್ನಿಸುತ್ತಿದ್ದು, ಇಡೀ ಚಿತ್ರತಂಡ ಒಂದಾಗಿ ಕೆಲಸ ಮಾಡುತ್ತಿದೆ.