ಪರಸ್ಪರ ಮುನಿಸಿಕೊಂಡು ದೂರಾಗಿದ್ದ ಕ್ರೇಜಿಸ್ಟಾರ್ ರವಿಚಂದ್ರನ್, ಹೃದಯಗಳ ಮಿಡಿತ ಅರಿತ ಗೀತರಚನೆಕಾರ, ಸಂಗೀತ ಮಾಂತ್ರಿಕ ಹಂಸಲೇಖ ಮತ್ತೆ ಒಂದಾಗುತ್ತಿರುವ ಶುಭ ಸೂಚನೆ ಸಿಕ್ಕಿದೆ.
ಹೌದು. ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಮೆರೆಯಲು ಬರುತ್ತಿರುವ 'ಅಜಂದ ಗಂಡು' ಚಿತ್ರದ ಮೂಲಕ ಇವರಿಬ್ಬರು ಒಂದಾಗಲಿದ್ದಾರೆ ಎನ್ನಲಾಗುತ್ತಿದೆ. ಕೆಲ ವರ್ಷಗಳಿಂದ ಇಬ್ಬರೂ ತಮ್ಮದೇ ಆದ ಜನಪ್ರಿಯತೆಯನ್ನು ಆಧಾರವಾಗಿಟ್ಟುಕೊಂಡು ಪ್ರತ್ಯೇಕವಾಗಿ ನೆಲೆ ಕಂಡುಕೊಂಡು ಯಶಸ್ವಿಯಾಗಿದ್ದಾರೆ. ಇವರ ಪ್ರತ್ಯೇಕ ಓಟದ ನಂತರವೂ ಮೊದಲಿನಷ್ಟೇ ಯಶಸ್ಸು ಕಂಡುಕೊಂಡಿದ್ದಾರೆ. ಆದರೆ ಒಂದಾಗಿದ್ದರೆ ಇನ್ನಷ್ಟು ಬಲ ಎನ್ನುವಂತೆ ಅಂತೂ ಈ ಮಾಜಿ ಮಿತ್ರರು ಜತೆ ಸೇರುವ ಕಾಲ ಮತ್ತೆ ಕೂಡಿ ಬಂದಿದೆ.
MOKSHA
ಇವರಿಬ್ಬರನ್ನು ಜತೆ ಸೇರಿಸಲು ಹೊರಟವರು ನಿರ್ಮಾಪಕ ಬಿ.ಎನ್. ಗಂಗಾಧರ್. ಇಬ್ಬರ ಕಡೆಯಿಂದಲೂ ಗಂಗಾಧರ್ ಅವರಿಗೆ ಪಾಸಿಟಿವ್ ಉತ್ತರವೇ ಸಿಕ್ಕಿದೆಯಂತೆ. ಹೌದು. 'ಪ್ರೇಮಲೋಕ' ಚಿತ್ರದ ಮೂಲಕ ಪವಾಡ ಸೃಷ್ಟಿಸಿದ ಈ ಜೋಡಿಯ ರಾಜಿ ಸಂಧಾನ ಪ್ರಕ್ರಿಯೆಗೆ ನಾಂದಿ ಹಾಡಿರುವವರು 'ಅಂಜದ ಗಂಡು' ಚಿತ್ರದ ನಿರ್ಮಾಪಕರಾದ ಬಿ.ಎನ್. ಗಂಗಾಧರ್. ಇದೇ ಚಿತ್ರ ಅಂದು ಗಂಗಾಧರ್ ಅವರಿಗೆ ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಪಕರೆನ್ನುವ ಪಟ್ಟ ಕೊಟ್ಟದ್ದು ಸುಳ್ಳಲ್ಲ. ಈಗ ಮತ್ತೊಂದು 'ಅಂಜದ ಗಂಡು' ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ. ಇದಕ್ಕಾಗಿ ತೆಲುಗಿನ ಸೂಪರ್ ಹಿಟ್ 'ಸಿಂಹರಾಶಿ' ಚಿತ್ರದ ಹಕ್ಕನ್ನು ಖರೀದಿಸಿಟ್ಟುಕೊಂಡಿದ್ದಾರೆ. ನಿರ್ದೇಶಕರಾಗಿ ರವಿಚಂದ್ರನ್ ಅವರ ಪರಮಾಪ್ತರಾಗಿರುವ ನಟ ಮೋಹನ್ ಆಯ್ಕೆಯಾಗಿದ್ದಾರೆ.
ಗಂಗಾಧರ್ ಹೇಳುವ ಪ್ರಕಾರ 'ಹೆಸರು ಮಾತ್ರ ಹಳೆಯದ್ದು, ಕಥೆ ಈಗಿನದ್ದು. ಅಂಜದ ಗಂಡು ಚಿತ್ರ ಅಂದು ಒಂದು ವಿಶಿಷ್ಟ ದಾಖಲೆ ನಿರ್ಮಿಸಿತು. ಈಗಿನ ಅಂಜದ ಗಂಡು ಕೂಡಾ ಮತ್ತೊಂದು ದಾಖಲೆ ನಿರ್ಮಿಸುವುದರಲ್ಲಿ ಅನುಮಾನವಿಲ್ಲ' ಎನ್ನುತ್ತಾರೆ.