15ರ ಹರೆಯದ ಮಕ್ಕಳು ಏನು ಮಾಡುತ್ತಾರೆ? ತಮ್ಮ ಪಾಡಿಗೆ ತಾವು ಶಾಲೆಗೆ ಹೋಗುತ್ತಿರುತ್ತಾರೆ. ಜೊತೆ ಮೋಜು ಮಸ್ತಿ ಗೆಳೆಯರು ಸುತ್ತಾಟ ಅಂತ ಓದಿನ ಜೊತೆಜೊತೆಗೇ ಸಿಕ್ಕಾಪಟ್ಟೆ ತರಲೆ ಮಾಡ್ತಾ ಇರ್ತಾರೆ. ಇನ್ನೂ ಕೆಲವರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಓದಿನ ಜೊತೆಗೆ ಹತ್ತು ಹಲವು ಕಲಿಕೆಗಳಲ್ಲಿ ತೊಡಗಿರುತ್ತಾರೆ. ಇವನ್ನೂ ಮೀರಿ ಏನಾದರೂ ಮಾಡಲು ಸಾಧ್ಯವೇ? ಸಾಧ್ಯ, ಎಂಬುದನ್ನು ಸಾಬೀತು ಮಾಡಿ ತೋರಿಸಿದವರು ಮಾಸ್ಟರ್ ಕಿಶನ್.
ಹೌದು. ಎಳೆವೆಯಲ್ಲೇ ಚಿತ್ರ ನಿರ್ದೇಶಕನಾಗಿ ಗಮನ ಸೆಳೆದ ಈ ಪೋರ ಈಗ '15' 'ಈ ವಯಸ್ಸೇ ಒಂಥರಾ...' ಅನ್ನುವ ಚಿತ್ರ ಮಾಡಲು ಮುಂದಾಗಿದ್ದಾನೆ. ಈ ವಯಸ್ಸಿನಲ್ಲಿ ಆಗುವ ಮನಸ್ಸಿನ ಭಾವನೆ ಮತ್ತು ದೈಹಿಕ ಬದಲಾವಣೆಯನ್ನು ಹಾಸ್ಯಮಯವಾಗಿ ಕೊಂಚ ಸೆಂಟಿಮೆಂಟ್ ಸೇರಿಸಿಕೊಂಡು ಚಿತ್ರ ಕಥೆ ಮಾಡಲಾಗಿದೆ. ಅದಕ್ಕೆ ಇಲ್ಲಿವರೆಗೆ ಮಾಸ್ಟರ್ ಆಗಿದ್ದ ಕಿಶನ್ ನಾಯಕರಾಗುತ್ತಿದ್ದಾರೆ ಈ ಚಿತ್ರದ ಮೂಲಕ. ಅವರ ತಂದೆ ಶ್ರೀಕಾಂತ್ ಚಿತ್ರದ ನಿರ್ದೇಶಕರು.
ಅಂದಹಾಗೆ, ಈ ಚಿತ್ರಕ್ಕೆ ಕಿಶನ್ ತಂಗಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಕಳೆದ ವಾರ ಅಧಿಕೃತ ಪೂಜೆ ನಡೆದಿದೆ. ಮುಂದಿನ ತಿಂಗಳು ಶೂಟಿಂಗ್ ಆರಂಭವಾಗಲಿದೆ. ಚಿತ್ರದಲ್ಲಿ 15ರ ವಯಸ್ಸಿನ ನಾಯಕಿ ರುಶಿಕಾ ನಟಿಸುತ್ತಿದ್ದಾರೆ. ಇವರು ಇದಕ್ಕಾಗಿ ಮುಂಬೈನಿಂದ ಅಗಮಿಸಲಿದ್ದಾರೆ. ಇವರ ಜತೆ ಹಾಸನದ ಪೋರ ಮಾಸ್ಟರ್ ಲಕ್ಷ್ಮಣ್ ಇರುತ್ತಾರೆ. ಕೇರಾಫ್ ಫುಟ್ಪಾತ್ ನಂತರ ಭರ್ತಿ ಮೂರು ವರ್ಷಗಳ ನಂತರ ಮತ್ತೆ ನಿರ್ಮಾಣಕ್ಕೆ ಕಿಶನ್ ಕುಟುಂಬ ಇಳಿದಿದೆ. ಈ ನಡುವೆ ಕಿಶನ್ ಕಿರಿಕ್ ಚಿತ್ರವನ್ನು ಮಾಡಬೇಕಿತ್ತು. ಆದರೆ ಅದನ್ನು ಥ್ರಿ ಡಿ ಚಿತ್ರ ಮಾಡಬೇಕೆಂದು ಇನ್ನಷ್ಟು ದಿನ ಮುಂದೆ ಹಾಕಿದ್ದಾರೆ. ಈ ಮೂರು ವರ್ಷಗಳಲ್ಲಿ ಕಿಶನ್ ಆರು ದೇಶಗಳನ್ನು ಸುತ್ತಿದ್ದಾನೆ. ಅಷ್ಟು ದೇಶದ ಸಾವಿರಾರು ಮಕ್ಕಳೊಂದಿಗೆ ಆಟ ಆಡಿದ್ದಾನೆ. ಸಂತೋಷ ಹಂಚಿಕೊಂಡಿದ್ದಾನೆ. ಅನುಭವ ಪಡೆದಿದ್ದಾನೆ. ಈ ವರ್ಷ ಹತ್ತನೇ ತರಗತಿ ಓದುತ್ತಿದ್ದಾನೆ, 95 ಪರ್ಸೆಂಟ್ ಅಂಕ ತೆಗೆಯಲು ಓದುತ್ತಿದ್ದಾನೆ. ಅದಕ್ಕೆ ಎಲ್ಲೂ ತೊಂದರೆಯಾಗದಂತೆ ಶೂಟಿಂಗ್ ನಡೆಯಲಿದೆ ಎನ್ನುತ್ತಾರೆ ಕಿಶನ್ ತಂದೆ.