ವಿಜಯ ರಾಘವೇಂದ್ರ ಅಭಿನಯದ ವಿನಾಯಕ ಗೆಳೆಯರ ಬಳಗ ಚಿತ್ರದ ಚಿತ್ರೀಕರಣ ಒಂದೆಡೆ ಕೊನಯ ಹಂತ ತಲುಪಿದೆ. ಈ ನಡುವೆ ಚಿತ್ರದ ಕಥೆ ಬರೆದದ್ದು ಯಾರು? ಎಂಬ ಜಿಜ್ಞಾಸೆ ಹಲವರನ್ನು ಕಾಡಿದೆ. ಹೆಚ್ಚಿನವರು ಗೀತ ರಚನೆಕಾರ ನಾಗೇಂದ್ರ ಪ್ರಸಾದ್ ಎಂದುಕೊಂಡಿದ್ದಾರೆ. ಆದರೆ, ಅಸಲು ಬೇರೆಯೇ ಅಗಿದೆ. ಕತೆಯ ನಿಜವಾದ ಹಕ್ಕುದಾರ ಸುರೇಶ್ ಅಂತೆ.
ಸುರೇಶ್ ಎಂಬವರು ಖಾಸಗಿ ವಾಹಿನಿಯೊಂದರಲ್ಲಿ ಸಿನಿಮಾ ವಿಭಾಗ ನೋಡಿಕೊಳ್ಳುತ್ತಿದ್ದಾರಂತೆ. ತುಂಬಾ ವರ್ಷಗಳಿಂದ ಕೈಯಲ್ಲೊಂದು ನೋಟ್ ಬುಕ್ ಹಿಡಿದು, ಕೆಲಸದ ಬಿಡುವಿದ್ದಾಗ ಗಾಂಧಿನಗರದಲ್ಲಿ ಓಡಾಡಿದ್ದಾರಂತೆ. ತುಂಬಾ ಜನ ಕಥೆ ಕೇಳಿ ಇಷ್ಟಪಟ್ಟಿದ್ದೂ ಉಂಟು. ನಾಳೆ ಮಾತನಾಡ್ತೀವಿ ಎಂದು ಹೇಳಿ, ಮರುದಿನ ಫೋನ್ ಕಾಲ್ ಕಟ್ ಮಾಡಿದ್ದೂ ಉಂಟು. ಆದರೆ, ಸುರೇಶ್ ಈಗ ಮೂಕಹಕ್ಕಿಯಾಗಿದ್ದಾರೆ. ಕಥೆ ಎಲ್ಲಿ ಎಂದು ಕೇಳಿದರೆ ವಿಚಿತ್ರವಾಗಿ ನಗುತ್ತಾರೆ. ಅದೊಂದು ಸುಂದರ ಸ್ವಪ್ನ. ಈಗ ಮರೆತುಬಿಟ್ಟಿದ್ದೇನೆ. ಆ ವಿಷಯ ಬಿಟ್ಟು ಬೇರೆ ಏನಾದರೂ ಕೇಳಿ ಎಂದು ಮತ್ತೆ ವಿಷಾದದ ನಗು ಬೀರುತ್ತಿದ್ದಾರಂತೆ ಸುರೇಶ್.
ಆಗಿದ್ದು ಇಷ್ಟೇ, ಸುಮಾರು ಕೆಲ ತಿಂಗಳ ಹಿಂದೆ ಇದೇ ನಾಗೇಂದ್ರ ಪ್ರಸಾದ್ ಬಳಿ ಹೋಗಿ, ಸುರೇಶ್ ವಿನಾಯಕ ಗೆಳೆಯರ ಬಳಗ ಕಥೆಹೇಳಿದ್ದಾರೆ. ಪ್ರಸಾದ್‌ಗೂ ಸುರೇಶ್‌ಗೂ ಲಿಂಕ್ ಕೊಡಿಸಿದ್ದು ಮಳವಳ್ಳಿ ಸಾಯಿ ಕೃಷ್ಣ. ಕಥೆ ಕೇಳಿದ್ದೇ ತಡ, ನಾಗೇಂದ್ರ ಪ್ರಸಾದ್ ವಿಚಾರ ಮಾಡಿ, ಹೇಳುತ್ತೇನೆ ಎಂದಿದ್ದಾರೆ. ಮರುದಿನ ಫೋನ್ ಮಾಡಿದರೆ, 'ಸುರೇಶ್ ಅವ್ರೇ, ನೀವು ತಪ್ಪು ತಿಳಿದುಕೊಳ್ಳುವುದಿಲ್ಲ ಎಂದರೆ ಒಂದು ಮಾತು. ನಾನು ನಿಮ್ಮ ಕಥೆಗೂ ಮುಂಚೆ ಒಂದು ಕಥೆ ಮಾಡಿಕೊಂಡಿದ್ದೆ. ಅದರಲ್ಲೂ ನಿಮ್ಮ ಕಥೆ ಥರದ ಎಳೆ ಇದೆ. ಅದನ್ನು ಇಟ್ಟುಕೊಂಡು ಡೆವಲಪ್(!) ಮಾಡಿದ್ದೇನೆ. ನೀವು ಬೇಜಾರು ಮಾಡಿಕೊಳ್ಳಬೇಡಿ' ಎಂದು ಸಮಾಧಾನ ಮಾಡಿದ್ದಾರಂತೆ.
ಸುರೇಶ್‌ಗೆ ಒಮ್ಮೆ ಪ್ರಪಂಚವೇ ತಲೆ ಮೇಲೆ ಬಿದ್ದಂತೆ ಆಯಿತಂತೆ. ನಾಗೇಂದ್ರ ಪ್ರಸಾದ್ ಮಾತಿಗೆ ಎದುರು ಮಾತನಾಡದೇ ಸುಮ್ಮನೇ ಎದ್ದು ಬಂದಿದ್ದಾರೆ. ಕನಸಿನ ಅರಮನೆ ಅದೇ ಟೈಂನಲ್ಲಿ ಕುಸಿದು ಬಿದ್ದಿದೆ. ಒಳಗೊಳಗೇ ಯಾರ ಬಳಿಯೂ ತಮ್ಮ ಸಂಕಟ ಹೇಳಿಕೊಳ್ಳಲಾಗದೇ ಸಂಕಟ ಪಡುತ್ತಿದ್ದಾರೆ. ಕಥೆ ಬಗ್ಗೆ ಕೇಳಿದರೆ, 'ಸರ್, ನನಗೆ ಗೊತ್ತು. ಆ ಕಥೆಯನ್ನು ಅವರು ಹೇಗೇ ಚಿತ್ರದಲ್ಲಿ ತೋರಿಸಿದರೂ ಅದಕ್ಕಿಂತ ಭಿನ್ನವಾಗಿ ನಾನು ಮಾಡಿ, ತೋರಿಸುತ್ತೇನೆ. ಕಾಲ ಎಲ್ಲಕ್ಕೂ ಉತ್ತರಿಸುತ್ತದೆ!' ಎನ್ನುತ್ತಾರೆ. ಅವರಿಗೆ ಒಳ್ಳೆಯದಾಗಲಿ.