ಹಳ್ಳಿ ಹುಡುಗಿಯ ಪಾತ್ರದಲ್ಲಿ ಈ ಪ್ಯಾಟೆ ಹುಡುಗಿ ಶರ್ಮಿಳಾ ಮಾಂಡ್ರೆ
MOKSHA
'ಕೃಷ್ಣ' ಚಿತ್ರದಲ್ಲಿ 'ನೀನು ಬಂದ ಮೇಲೆ ತಾನೆ ಇಷ್ಟು ಚಂದ ಈ ಬಾಳು...' ಎಂದು ಹಾಡಿ ನಲಿದಿದ್ದ ಶರ್ಮಿಳಾ ಮಾಂಡ್ರೆ ಆ ನಂತರ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದು ಬಹಳ ಕಡಿಮೆ ಬಾರಿ. ಗೋಲ್ಡನ್ ಸ್ಟಾರ್ ಜತೆ ನಟಿಸಿದ ನಂತರವೂ ಅಷ್ಟಾಗಿ ಜನಪ್ರಿಯತೆ ಪಡೆಯದ ಈ ನಟಿ ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿದರೂ, ಯಾಕೋ ಆಕೆಯ ಅದೃಷ್ಟವೇ ನೆಟ್ಟಗಿರಲಿಲ್ಲ. ಈಗ ಬಹುತೇಕ ಕಾಣೆಯೇ ಆಗಿದ್ದ ಶರ್ಮಿಳಾ ಮತ್ತೆ ಸುದ್ದಿಯಾಗಿದ್ದಾರೆ.
ಕೃಷ್ಣನ ಎದುರು ಹಳ್ಳಿ ಗೌರಮ್ಮನಂತೆ ಲಂಗ ದಾವಣಿಯಲ್ಲಿ ಬಂದ ಇವಳನ್ನು ಜನ ಒಪ್ಪಿಲ್ಲ. ಆದರೆ ಅಸಲಿ ಇವರು ಸಂಪೂರ್ಣ ಪ್ಯಾಟೆ ಹುಡುಗಿ. ವಿಪರೀತ ಮಾಡ್ ಹುಡುಗಿ. ಇಂಥವಳಿಗೆ ಆ ರೀತಿ ಹಳ್ಳಿ ಹುಡುಗಿ ಮಾಡಿದರೆ ಗೆಲ್ಲಲು ಸಾದ್ಯವೇ ಎಂದು ಮೂಗೆಳೆಯುವವರಿಗೆ ಇನ್ನೊಂದು ಆಘಾತಕಾರಿ ಸುದ್ದಿ. ಅವರೀಗ ಮತ್ತೆ ಲಂಗ ದಾವಣಿ ತೊಡಲು ಮುಂದಾಗಿದ್ದಾರೆ.
ಹೌದು. ಶರ್ಮಿಳಾ ಸ್ವಯಂವರ ಚಿತ್ರದಲ್ಲಿ ಮತ್ತೆ ಸಾಂಪ್ರದಾಯಿಕ ಉಡುಗೆ ತೊಡಲು ಹೊರಟಿದ್ದಾರೆ. ಹಳ್ಳಿ ಹುಡುಗಿಯನ್ನು ಸರಿಯಾಗಿ ನೋಡದ ಈ ಹುಡುಗಿ ಅದ್ಹೇಗೆ ಅಭಿನಯಿಸುತ್ತಾರೆ ಎಂದು ಗಾಂಧಿನಗರದ ಜನ ಪ್ರಶ್ನಿಸುತ್ತಿದ್ದಾರೆ. ಆದರೆ ನಟನೆಗೆ ಯಾವುದೂ ಬೇಧವಿಲ್ಲ ಬಿಡಿ ಅಂತಲೂ ಕೆಲವರು ಹೇಳುತ್ತಿದ್ದಾರೆ.
ಒಂದು ಉತ್ತಮ ಪಾತ್ರದಲ್ಲಿ ನಟಿಸಬೇಕೆಂಬ ಮಹದಾಸೆಯಲ್ಲಿ ಕಾಯುತ್ತಿದ್ದ ಶರ್ಮಿಳಾರಿಗೆ ಕೆ. ಮಾದೇಶ್ ನೀಡಿದ ಈ ಚಿತ್ರದ ಆಫರ್ ಒಕೆ ಆಗಿದೆಯಂತೆ. ತುಂಬಾ ಇಷ್ಟಪಟ್ಟು ನಟಿಸುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಆಲ್ ದಿ ಬೆಸ್ಟ್ ಶರ್ಮಿಳಾ.