ರಂಗಪ್ಪ ಹೋಗ್ಬಿಟ್ನಾ..? ಇದೇನು ಹುಚ್ಚು ಹುಚ್ಚು ಮಾತು ಆಡ್ತೀರಿ, ರಂಗಪ್ಪನವರು ಗಟ್ಟಿಯಾಗಿಯೇ ಇದ್ದಾರೆ. ಅಪಶಕುನ ಆಡಬೇಡಿ ಅಂತ ಗದರಿಸಬೇಡಿ. ಇದು ರಮೇಶ್ ಅಭಿನಯದ ಹೊಸ ಚಿತ್ರದ ಹೆಸರು.
ಸಾಲು ಸಾಲು ಹಾಸ್ಯ ಚಿತ್ರದಲ್ಲಿ ಅಭಿನಯಿಸುತ್ತಾ, ಸೋಲುತ್ತಲೇ ಇರುವ ರಮೇಶ್ ಇಷ್ಟಾಗಿಯೂ ಹಾಸ್ಯ ಪಾತ್ರ ಮಾಡುವ ಹುಚ್ಚು ಕಳೆದುಕೊಂಡಿಲ್ಲ. ಇದೀಗ ಹೊಸ ಚಿತ್ರ 'ರಂಗಪ್ಪ ಹೋಗ್ಬಿಟ್ನಾ'ದಲ್ಲಿ ಅಭಿನಟಿಸುತ್ತಿದ್ದಾರೆ. ಪ್ರೇಕ್ಷಕರ ಕೃಪೆಯಿಂದ ದೂರವಾಗಿದ್ದರೂ, ಹಾಸ್ಯ ಪಾತ್ರಕ್ಕೆ ಮಾತ್ರ ರಮೇಶ್ ಅಂಟಿಕೊಂಡಿದ್ದಾರೆ. ಒಂದರ ಮೇಲೊಂದು ಪ್ರಯೋಗ ಮಾಡುತ್ತಲೇ ಇದ್ದಾರೆ. ಸೋಲು ಬೆನ್ನು ಬಿಟ್ಟಿಲ್ಲ. ಸ್ವಂತ ನಿರ್ಮಾಣವಿರಲಿ, ಬೇರೆಯವರ ನಿರ್ಮಾಣದ್ದಿರಲಿ ಚಿತ್ರ ಮಾತ್ರ ಸೋತು ಸುಣ್ಣವಾಗುತ್ತಲೇ ಇವೆ.
ಎನ್. ರವಿಕುಮಾರ್ ಅವರ ಚಿತ್ರ ಇದು. ಇವರು ಈ ಹಿಂದೆ ರಮೇಶ್ ಅಭಿನಯದ ಪ್ರೀತಿಯಿಂದ ರಮೇಶ್ ಚಿತ್ರ ನಿರ್ಮಿಸಿದ್ದರು. ನಿರ್ದೇಶನವನ್ನು ಪ್ರಸನ್ನ ಮಾಡಲಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯೂ ಇವರದ್ದೇ. ಪ್ರಸನ್ನ ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಇದಕ್ಕೂ ಮುನ್ನ ಇವರು ಸಿಕ್ಸರ್, ಮೊಗ್ಗಿನ ಮನಸ್ಸು, ನಾನು ನೀನು ಜೋಡಿ, ಶ್ರೀ ಹರಿಕಥೆ ಮತ್ತು ಕೃಷ್ಣನ್ ಲವ್ ಸ್ಟೋರಿ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು.
ಚಿತ್ರದಲ್ಲಿ ನಾಯಕಿಯಾಗಿ ಗಂಡ ಹೆಂಡತಿ ಚಿತ್ರದ ಖ್ಯಾತಿಯ ನಟಿ ಸಂಜನಾ ಅಭಿನಯಿಸಲಿದ್ದಾರೆ. ಸಿಹಿಕಹಿ ಚಂದ್ರು, ಕರಿಬಸವಯ್ಯ ಮುಖ್ಯಪಾತ್ರದಲ್ಲಿ ಮಿಂಚಲಿದ್ದಾರೆ. ಎ.ಸಿ. ಮಹೇಂದರ್ ಛಾಯಾಗ್ರಹಣ ಚಿತ್ರಕ್ಕೆ ಇದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ನಿರಂತರ 35 ದಿನ ಚಿತ್ರೀಕರಣ ನಡೆಯಲಿದೆಯಂತೆ. ಈ ಹಿಂದೆ ಈ ಚಿತ್ರಕ್ಕೆ ರಂಗೀಲಾ ಅಂತ ಹೆಸರಿಡಲಾಗಿತ್ತು. ಆದರೆ ಈಗ ಬದಲಿಸಲಾಗಿದೆ. ಕಾನ್ಪಿಡೆಂಟ್ ಸಮೂಹ ಈ ಚಿತ್ರ ನಿರ್ಮಿಸುತ್ತಿದೆ.